ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೋಸತ್ತ ರೈತರೊಬ್ಬರು ಮಿಕ್ಸಿಯೊಂದಿಗೆ ಮೆಸ್ಕಾಂ ಕಚೇರಿಗೆ ತೆರಳಿ ಮಸಾಲೆ ರುಬ್ಬಿಕೊಂಡು ಬರುತ್ತಿದ್ದು, ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಮೆಸ್ಕಾಂ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.
ಈ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದ್ದು, ಹೊಳೆಹೊನ್ನೂರು ಸಮೀಪದ ಮಂಗೋಟೆ ಗ್ರಾಮದ ರೈತ ಹನುಮಂತ, ಕಳೆದ ವರ್ಷ ಸ್ವಂತ ಹಣದಲ್ಲಿ ಟಿ.ಸಿ. ಅಳವಡಿಸಿಕೊಂಡು ತಮ್ಮ ನಿವಾಸಕ್ಕೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ಮೀಟರ್ ಹಾಗೂ ಕಂಬ ಹಾಕಿದ್ದರೂ ಸಹ ಅವರಿಗೆ ಕೇವಲ ಎರಡು ತಾಸು ಮಾತ್ರ ವಿದ್ಯುತ್ ಲಭ್ಯವಾಗುತ್ತಿತ್ತು.
ಹೀಗಾಗಿ ಅವರು ಆರಂಭದಲ್ಲಿ ಅಕ್ಕಪಕ್ಕದ ಮನೆಗಳಿಗೆ ತೆರಳಿ ಮಸಾಲೆ ರುಬ್ಬಿಸಿಕೊಂಡು ಬರುವುದು, ಮೊಬೈಲ್ ಚಾರ್ಜ್ ಮಾಡುವುದನ್ನು ಮಾಡುತ್ತಿದ್ದರು. ಇದರ ಜೊತೆಗೆ ತಮ್ಮ ನಿವಾಸಕ್ಕೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದರು.
ಹೀಗೆ ಒಮ್ಮೆ ಅಧಿಕಾರಿಗಳೊಂದಿಗೆ ನಡೆದ ಮಾತಿನ ಚಕಮಕಿ ವೇಳೆ ಅವರು ಕಚೇರಿಗೆ ಬಂದು ಮಸಾಲೆ ರುಬ್ಬಿಕೊಂಡು ಹೋಗಿ ಎಂದು ಹೇಳಿದ್ದರಂತೆ. ಅಂದಿನಿಂದ ರೈತ ಹನುಮಂತ ಮಿಕ್ಸಿಯೊಂದಿಗೆ ಮೆಸ್ಕಾಂ ಕಚೇರಿಗೆ ತೆರಳಿ ಮಸಾಲೆ ರುಬ್ಬಿಕೊಂಡು ಬರಲು ಆರಂಭಿಸಿದ್ದಾರೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ 8 ಮಂದಿ ಮೆಸ್ಕಾಂ ಸಿಬ್ಬಂದಿಗಳಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.