ಪೋರ್ನ್ ಚಿತ್ರಗಳ ದಂಧೆ ಪ್ರಕರಣದಲ್ಲಿ ನಟಿ ಪೂನಂ ಪಾಂಡೆಗೆ ಬಿಗ್ ರಿಲೀಫ್ ದೊರೆತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂ ಕೋರ್ಟ್ ಪೂನಂಗೆ ಬಂಧನದಿಂದ ರಕ್ಷಣೆ ನೀಡಿದೆ.
ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಪೂನಂ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಮತ್ತು ಬಿ.ವಿ. ನಾಗರತ್ನ ಅವರ ಪೀಠವು ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಅರ್ಜಿದಾರರ(ಪೂನಂ ಪಾಂಡೆ) ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ.
ನಟಿ ಶೆರ್ಲಿನ್ ಚೋಪ್ರಾ ಜೊತೆಗೆ ಪೂನಂ ಪಾಂಡೆ ಅವರನ್ನು ಎಫ್‌ಐಆರ್‌ನಲ್ಲಿ ಆರೋಪಿ ಎಂದು ಉಲ್ಲೇಖಿಸಲಾಗಿದೆ. ನವೆಂಬರ್ 25, 2021 ರಂದು ಬಾಂಬೆ ಹೈಕೋರ್ಟ್ ಪೂನಂ ಪಾಂಡೆಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅಶ್ಲೀಲ ವಿಡಿಯೋಗಳನ್ನು ವಿತರಿಸಿದ ಆರೋಪದ ಮೇಲೆ ರಾಜ್ ಕುಂದ್ರಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಡಿಸೆಂಬರ್ ನಲ್ಲಿ, ಸುಪ್ರೀಂ ಕೋರ್ಟ್ ಈತನಿಗೂ ಬಂಧನದಿಂದ ರಕ್ಷಣೆ ನೀಡಿದೆ.
ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ತಡೆಗಟ್ಟುವಿಕೆ ಕಾಯಿದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಗಳ ಅಡಿಯಲ್ಲಿ ಕುಂದ್ರಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಲೈಂಗಿಕ ಮತ್ತು ಅಶ್ಲೀಲ ವಿಡಿಯೊಗಳನ್ನು ಹಂಚಿದ್ದಾರೆಂದು ಆರೋಪಿಸಲಾಗಿದೆ. ಕೆಲವು ದಿನಗಳು ಜೈಲಿನಲ್ಲಿ ಕಳೆದ ಕುಂದ್ರಾ, ಬಂಧನದ ಭಯದಿಂದ, ಮೊದಲು ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಕೋರಿದರು, ಆದರೆ ಅದು ನಿರಾಕರಿಸಲ್ಪಟ್ಟಿತು, ನಂತರ ಹೈಕೋರ್ಟ್ ಮೊರೆ ಹೋದರು ಅಲ್ಲೂ ನಿರಾಕರಣೆಯಾದ್ಮೇಲೆ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು.