ಬ್ರೆಜಿಲ್‌ನಲ್ಲಿ ವೈದ್ಯಲೋಕಕ್ಕೇ ಅಚ್ಚರಿಯಾಗುವಂತಹ ಘಟನೆಯೊಂದು ನಡೆದಿದೆ. ಗೋಯಾಸ್‌ನಲ್ಲಿರುವ ಮಿನೆರಿಯೊಸ್‌ನಲ್ಲಿ 19 ವರ್ಷದ ಯುವತಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದ್ರೆ ಆ ಮಕ್ಕಳ ತಂದೆ ಒಬ್ಬರೇ ಇಲ್ಲ, ಬೇರೆ ಬೇರೆ ಅನ್ನೋದು ಗೊತ್ತಾಗಿದೆ.
ಇದು ಅತ್ಯಂತ ಅಪರೂಪದ ಪ್ರಕರಣ. ಮಿಲಿಯನ್‌ಗೆ ಒಬ್ಬರಲ್ಲಿ ಇಂತಹ ಸಾಧ್ಯತೆ ಇರುತ್ತದೆ. ಬೇರೆ ಬೇರೆ ಅಪ್ಪಂದಿರಿಗೆ ಹುಟ್ಟಿದ ಅವಳಿಗಳನ್ನು ನೋಡಿ ವೈದ್ಯರೇ ದಿಗ್ಭ್ರಮೆಗೆ ಒಳಗಾಗಿದ್ದಾರೆ. ಯುವತಿ ಒಂದೇ ದಿನ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ.
ಅವಳಿಗಳ ತಂದೆ ಯಾರೆಂಬುದರ ಬಗ್ಗೆ ಅನುಮಾನವಿತ್ತು. ಹಾಗಾಗಿ ಖಚಿತಪಡಿಸಿಕೊಳ್ಳಲು ಪಿತೃತ್ವ ಪರೀಕ್ಷೆ ಮಾಡಲಾಯ್ತು. ವರದಿಯಲ್ಲಿ ಅವಳಿ ಮಕ್ಕಳ ತಂದೆ ಬೇರೆ ಬೇರೆ ಎಂಬುದು ಬಹಿರಂಗವಾಗಿದೆ. ಮಕ್ಕಳ ತಂದೆ ತಾನೇ ಎಂದು ಭಾವಿಸಿದ್ದ ವ್ಯಕ್ತಿ ಡಿಎನ್‌ಎ ಪರೀಕ್ಷೆಯ ವರದಿ ನೋಡಿ ಆಘಾತಕ್ಕೊಳಗಾಗಿದ್ದಾನೆ.
ಒಂದೇ ದಿನ ಇಬ್ಬರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದ ಯುವತಿಗೆ ತಂದೆ ಯಾರೆಂಬ ಬಗ್ಗೆ ಅನುಮಾನವಿತ್ತು. ಆದ್ರೆ ಮಕ್ಕಳ ತಂದೆ ಬೇರೆ ಬೇರೆ ಆಗಬಹುದೆಂಬ ನಿರೀಕ್ಷೆ ಇರಲಿಲ್ಲ. ಹಾಗಾಗಿ ಫಲಿತಾಂಶ ಆಕೆಗೂ ಅಚ್ಚರಿ ತಂದಿದೆ. ಇದು ಸಂಭವಿಸಬಹುದೆಂದು ನನಗೆ ತಿಳಿದಿರಲಿಲ್ಲ, ಶಿಶುಗಳು ಒಬ್ಬರನ್ನೊಬ್ಬರು ತುಂಬಾ ಹೋಲುತ್ತವೆ ಅಂತಾ ಆಕೆ ಹೇಳಿದ್ದಾಳೆ.
“ಒಂದೇ ತಾಯಿಯ ಎರಡು ಎಗ್‌ಗಳನ್ನು ವಿಭಿನ್ನ ಪುರುಷರು ಫಲವತ್ತಾಗಿಸಿದಾಗ ಇದು ಸಾಧ್ಯ. ಶಿಶುಗಳು ತಾಯಿಯ ಆನುವಂಶಿಕ ವಸ್ತುಗಳನ್ನು ಹಂಚಿಕೊಳ್ಳುತ್ತವೆ, ಆದರೆ ಅವು ವಿಭಿನ್ನ ಜರಾಯುಗಳಲ್ಲಿ ಬೆಳೆಯುತ್ತವೆ” ಎಂದು ಡಾ. ಟುಲಿಯೊ ಜಾರ್ಜ್ ಫ್ರಾಂಕೊ ತಿಳಿಸಿದ್ದಾರೆ.
ಈ ವಿದ್ಯಮಾನವು ಅತ್ಯಂತ ಅಪರೂಪವಾಗಿದ್ದರೂ, ಅದು ಸಂಪೂರ್ಣವಾಗಿ ಅಸಾಧ್ಯವಲ್ಲ. ವೈಜ್ಞಾನಿಕವಾಗಿ, ಇದನ್ನು ಹೆಟೆರೊಪರೆಂಟಲ್ ಸೂಪರ್‌ಫೆಕಂಡೇಶನ್ ಎಂದು ಹೆಸರಿಸಲಾಗಿದೆ. ವರದಿಗಳ ಪ್ರಕಾರ, ಪ್ರಪಂಚದಲ್ಲಿ ಇಂತಹ ಕೇವಲ 20 ಪ್ರಕರಣಗಳಿವೆ. ಅವಳಿ ಮಕ್ಕಳ ಜನನ ಪ್ರಮಾಣಪತ್ರದಲ್ಲಿ ಒಬ್ಬರ ಹೆಸರನ್ನು ಮಾತ್ರ ಸೇರಿಸಲಾಗುತ್ತದೆ.