ಅರೆಸೇನಾ ಪಡೆಗಳ ಕ್ಯಾಂಟೀನ್‌ಗಳಲ್ಲಿ ಖಾದಿ ಮಾರಾಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಕೈಯಿಂದ ತಯಾರಿಸಿದ ಖಾದಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದ್ದು, ಈ ಮೂಲಕ ಸರ್ಕಾರವು ಸ್ವದೇಶಿ ಅಭಿಯಾನಕ್ಕೆ ಒತ್ತು ನೀಡಿದ್ದಾರೆ. ಇನ್ಮುಂದೆ ಖಾದಿ ಉತ್ಪನ್ನಗಳು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಕ್ಯಾಂಟೀನ್‌ಗಳಲ್ಲಿ ಲಭ್ಯವಿರುತ್ತವೆ.
ಅಸ್ಸಾಂನ ತಮುಲ್‌ಪುರದಲ್ಲಿ ಬಿಎಸ್‌ಎಫ್‌ನ ಕೇಂದ್ರ ಕಾರ್ಯಾಗಾರ ಮತ್ತು ಮಳಿಗೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಶಾ ಅವರು ಮಾತನಾಡಿದ್ದಾರೆ. ಖಾದಿಯು ಗಾಂಧೀಜಿಯವರಿಗೆ ಸ್ವದೇಶಿಯ ಸಂಕೇತವಾಗಿತ್ತು. ಇದು ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡುವತ್ತ ಸಾಗುತ್ತಿರುವ ಮೊದಲ ಹೆಜ್ಜೆಯಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಖಾದಿ ಅಂದ್ರೆ ಶುದ್ಧತೆಯ ಪ್ರತೀಕವಾಗಿದೆ. 107 ಪ್ಯಾರಾಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಖಾದಿ ಉತ್ಪನ್ನಗಳ ಮಾರಾಟ ಪ್ರಾರಂಭವಾಗಿರುವುದು ತನಗೆ ಖುಷಿ ತಂದಿದೆ. ಶೀಘ್ರದಲ್ಲಿಯೇ ದೇಶಾದ್ಯಂತ ಎಲ್ಲಾ ಅರೆಸೇನಾ ಕ್ಯಾಂಟೀನ್‌ಗಳಲ್ಲಿ ಖಾದಿ ಉತ್ಪನ್ನಗಳು ಲಭ್ಯವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಅಧ್ಯಕ್ಷ ಕೆವಿಐಸಿ ವಿನಯ್ ಕುಮಾರ್ ಸಕ್ಸೇನಾ, ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಮತ್ತು ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಮಹಾನಿರ್ದೇಶಕರು ಉಪಸ್ಥಿತರಿದ್ದರು.