ತುಮಕೂರು: ಮಠದ ಆನೆಯನ್ನೇ ಅಪಹರಿಸಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕರಿಬಸವೇಶ್ವರ ಮಠದ ಆನೆಯನ್ನು ಚಿಕಿತ್ಸೆ ನೀಡುವ ನೆಪದಲ್ಲಿ ದುಷ್ಕರ್ಮಿಗಳ ಗುಂಪು ಕದ್ದೊಯ್ಯಲು ಪ್ಲಾನ್ ಮಾಡಿತ್ತು ಎಂದು ಮಠದ ಆಡಳಿತ ಮಂಡಳಿ ತುಮಕೂರು ಠಾಣೆಯಲ್ಲಿ ದೂರು ನೀಡಿದೆ.
ಕರಿಬಸವೇಶ್ವರ ಮಠದ ಲಕ್ಷ್ಮಿ ಎಂಬ ಹೆಣ್ಣಾನೆಗೆ ಚಿಕಿತ್ಸೆ ಕೊಡಿಸುವ ಪ್ಲಾನ್ ಮಾಡಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಾಯದೊಂದಿಗೆ ಅಪಹರಣಕ್ಕೆ ಸಂಚು ರೂಪಿಸಲಾಗಿದೆ. ಬನ್ನೇರುಘಟ್ಟದಲ್ಲಿ ಆನೆಗೆ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಆನೆಯನ್ನು ಲಾರಿಯಲ್ಲಿ ಹತ್ತಿಸಿಕೊಂಡು ಹೋಗಿದ್ದಲ್ಲದೇ ದಾಬಸ್ ಪೇಟೆ ಬಳಿ ಆನೆ ಮಾವುತನ ಮೇಲೆ ಹಲ್ಲೆ ನಡೆಸಿ, ಆತನನ್ನು ಕೆಳಗಿಳಿಸಿ ಆನೆಯನ್ನು ಕುಣಿಗಲ್ ಗೆ ತೆಗೆದುಕೊಂಡು ಹೋಗಿದ್ದಾರೆ.
ಕುಣಿಗಲ್ ನ ನಾರನಹಳ್ಳಿಯಲ್ಲಿ ಆನೆಯನ್ನು ಬಚ್ಚಿಡಲಾಗಿತ್ತು. ಆನೆಯ ಮೇಲೆ ಜೆಸಿಬಿಯಿಂದ ಹಲ್ಲೆ ನಡೆಸಲಾಗಿದೆ. ಅಲ್ಲಿಂದ ಗುಜರಾತ್ ಗೆ ಕರೆದೊಯ್ಯಲು ಪ್ಲಾನ್ ಮಾಡಿದ್ದರು ಎಂದು ಮಠದ ಸಿಬ್ಬಂದಿಗಳು ಆರೋಪಿಸಿದ್ದಾರೆ.
ಆನೆಯನ್ನು ದುಷ್ಕರ್ಮಿಗಳು ಗುಜರಾತ್ ಮೂಲದ ಸರ್ಕಸ್ ಕಂಪನಿಗೆ ಮಾರಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಮಠದ ಆಡಳಿತ ಮಂಡಳಿ ತುಮಕೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.