ಹಲವಾರು ಮಂದಿಯ ಮಹತ್ವದ ಕನಸಾಗಿರುವ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಶದೆಲ್ಲೆಡೆಯಿಂದ ಅಪಾರ ದಾನ ಹರಿದು ಬಂದಿರುವುದು ನಿಮಗೆ ಗೊತ್ತೇ ಇದೆ. ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಹಣ ಮಾತ್ರವಲ್ಲದೆ, ಅನೇಕ ವಸ್ತುಗಳನ್ನು ಕೂಡ ಜನರು ದೇಶದ ಮೂಲೆ-ಮೂಲೆಗಳಿಂದ ಕಳುಹಿಸಿಕೊಡುತ್ತಿದ್ದಾರೆ. ಇದೀಗ ರಾಮಮಂದಿರಕ್ಕೆ ಬರೋಬ್ಬರಿ ತೂಕದ ಬೀಗವನ್ನು ಇಲ್ಲೊಂದೆಡೆ ದಂಪತಿ ತಯಾರಿಸಿದ್ದು, ಎಲ್ಲರ ಹುಬ್ಬೇರಿಸಿದೆ.
ಹೌದು, ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ 65 ವರ್ಷದ ಸತ್ಯಪ್ರಕಾಶ್ ಶರ್ಮಾ ಹಾಗೂ ಆತನ ಪತ್ನಿ ಈ ಮಹತ್ತರ ಕಾರ್ಯವನ್ನು ಮಾಡಿದ್ದಾರೆ. ಬೀಗ ತಯಾರಿಸುವ ವೃತ್ತಿಯನ್ನೇ ಮಾಡುತ್ತಿರುವ ಅವರು ರಾಮ ಮಂದಿರಕ್ಕಾಗಿ ಬರೋಬ್ಬರಿ 10 ಅಡಿ ಉದ್ದ ಹಾಗೂ 400 ಕೆ.ಜಿ ತೂಗುವ ಬೀಗವನ್ನು ತಯಾರಿಸಿದ್ದಾರೆ. ಅಷ್ಟೇ ಅಲ್ಲ ಇಷ್ಟೊಂದು ತೂಕದ ಬೀಗಕ್ಕೆ 30 ಕೆ.ಜಿ ತೂಕದ ಕೀಲಿ ಕೈಯನ್ನು ತಯಾರಿಸಿರುವುದು ಮತ್ತೊಂದು ವಿಶೇಷ..!
ಈ ಬೀಗದ ಬೆಲೆ ಕೇಳಿದ್ರೆ ಖಂಡಿತಾ ನೀವು ಶಾಕ್ ಆಗ್ತೀರಾ..! ಬರೋಬ್ಬರಿ 2 ಲಕ್ಷ ರೂಪಾಯಿ ಮೌಲ್ಯದ ಬೀಗ ಇದಾಗಿದ್ದು, ಇದರ ಮೇಲೆ ರಾಮನ ಚಿತ್ರವನ್ನು ಕೆತ್ತಲಾಗಿದೆ. ಈ ಬೃಹತ್ ಬೀಗವನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಸಮರ್ಪಿಸುವುದಾಗಿ ದಂಪತಿ ಹೇಳಿದ್ದಾರೆ.
ಅಂದಹಾಗೆ, ಈ ಬೃಹತ್ ಬೀಗವನ್ನು ನಿರ್ಮಾಣ ಮಾಡಲು ಬರೋಬ್ಬರಿ ಆರು ತಿಂಗಳ ಕಾಲಾವಕಾಶವನ್ನು ತೆಗೆದುಕೊಂಡಿದ್ದಾರೆ. ಬೀಗದ ಕೈ ತುಕ್ಕು ಹಿಡಿಯಬಾರದು ಎಂಬ ಕಾರಣಕ್ಕೆ ಬೀಗಕ್ಕೆ ಸ್ಟೀಲ್ ಕೋಟಿಂಗ್ ಮಾಡಲಾಗಿದೆ. ಬೀಗದ ಕೀಲಿ ಕೈನ ಬಹುತೇಕ ಭಾಗವನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.