ಅಯೋಧ್ಯೆಯ ರಾಮಮಂದಿರ ಅತ್ಯಂತ ವಿಶಿಷ್ಟವಾದ ಆಚರಣೆಗೆ ಸಾಕ್ಷಿಯಾಗಿದೆ. ಜಗತ್ತಿನ ಏಳು ಖಂಡಗಳ 155 ನದಿಗಳಿಂದ ಸಂಗ್ರಹಿಸಿದ ನೀರನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಜಲಾಭಿಷೇಕದ ಮೂಲಕ ಅರ್ಪಿಸಲಾಯಿತು.
ದೆಹಲಿ ಮೂಲದ ಎನ್ಜಿಒ ‘ದೆಹಲಿ ಸ್ಟಡಿ ಗ್ರೂಪ್’ ಸದಸ್ಯರು, ವಿವಿಧ ದೇಶಗಳ ರಾಯಭಾರಿಗಳು ಮತ್ತು ದೆಹಲಿಯ ಮಾಜಿ ಬಿಜೆಪಿ ಶಾಸಕ ವಿಜಯ್ ಜಾಲಿ ನೇತೃತ್ವದ ಎನ್ಆರ್ಐಗಳ ಗುಂಪಿನ ಸಮ್ಮುಖದಲ್ಲಿ ರಾಮ ಜನ್ಮಭೂಮಿಯಲ್ಲಿರುವ ರಾಮನ ಆಸ್ಥಾನದ ಮುಂದೆ 155 ಪಾತ್ರೆಗಳಲ್ಲಿ ಜಲವನ್ನು ಅರ್ಪಣೆ ಮಾಡಲಾಯ್ತು.
ಈ ಸಂದರ್ಭದಲ್ಲಿ 40 ಕ್ಕೂ ಹೆಚ್ಚು ದೇಶಗಳ ಅನಿವಾಸಿ ಭಾರತೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅನೇಕ ದೇಶಗಳ ರಾಜತಾಂತ್ರಿಕರು ಐತಿಹಾಸಿಕ ಪವಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ವಿಶೇಷ. ರಾಮ ಮಂದಿರದಲ್ಲಿ ನಡೆದ ಐತಿಹಾಸಿಕ ಜಲಾಭಿಷೇಕದಲ್ಲಿ ಫಿಜಿ, ಮಂಗೋಲಿಯಾ, ಡೆನ್ಮಾರ್ಕ್, ಭೂತಾನ್, ರೊಮೇನಿಯಾ, ಹೈಟಿ, ಗ್ರೀಸ್, ಕೊಮೊರೊಸ್, ಕಾಬೊ ವರ್ಡೆ, ಮಾಂಟೆನೆಗ್ರೊ, ಟುವಾಲು, ಅಲ್ಬೇನಿಯಾ ಮತ್ತು ಟಿಬೆಟ್ನ ರಾಜತಾಂತ್ರಿಕರು ಭಾಗವಹಿಸಿದ್ದರು.
ಇದಲ್ಲದೆ, ಭೂತಾನ್, ಸುರಿನಾಮ್, ಫಿಜಿ, ಶ್ರೀಲಂಕಾ ಮತ್ತು ಕಾಂಬೋಡಿಯಾದಂತಹ ರಾಷ್ಟ್ರಗಳ ಮುಖ್ಯಸ್ಥರು ಸಹ ಈ ಕಾರ್ಯಕ್ಕೆ ಶುಭ ಹಾರೈಸಿದ್ದಾರೆ. ಪಾಕಿಸ್ತಾನ, ಚೀನಾ, ರಷ್ಯಾ ಮತ್ತು ಉಕ್ರೇನ್ನಿಂದಲೂ ಜಲವನ್ನು ತರಲಾಗಿದೆ. ಕಾರ್ಯಕ್ರಮದ ಸಂಚಾಲಕ ವಿಜಯ್ ಜಾಲಿ ಮಾತನಾಡಿ, ಮೊಘಲ್ ದೊರೆ ಬಾಬರ್ನ ಜನ್ಮಸ್ಥಳವಾದ ಉಜ್ಬೇಕಿಸ್ತಾನದ ಆಂಡಿಜಾನ್ ನಗರದಿಂದ ಪ್ರಸಿದ್ಧ ಕಶಕ್ ನದಿಯ ಪವಿತ್ರ ನೀರನ್ನು ಸಹ ಜಲಾಭಿಷೇಕಕ್ಕೆ ತರಲಾಗಿದೆ ಎಂದು ಹೇಳಿದರು.
ಇದರೊಂದಿಗೆ ಯುದ್ಧ ಪೀಡಿತ ರಷ್ಯಾ ಮತ್ತು ಉಕ್ರೇನ್ ಮಾತ್ರವಲ್ಲದೆ ಚೀನಾ ಹಾಗೂ ಪಾಕಿಸ್ತಾನದ ನೀರನ್ನು ಈ ಪುಣ್ಯ ಕಾರ್ಯಕ್ಕಾಗಿ ತರಲಾಗಿದೆ ಎಂದು ಮಾಹಿತಿ ನೀಡಿದರು. ಪವಿತ್ರ ಜಲವನ್ನು ಸಂಗ್ರಹಿಸಲು ಎರಡೂವರೆ ವರ್ಷಕ್ಕೂ ಹೆಚ್ಚು ಸಮಯ ಬೇಕಾಯಿತು. ಈ ಕಾರ್ಯಕ್ರಮವು ಭಗವಾನ್ ರಾಮನ ಆದರ್ಶಗಳ ಬಗ್ಗೆ ಭಾರತೀಯರು ಮಾತ್ರವಲ್ಲದೆ ವಿಶ್ವದ ನಾಗರಿಕರಲ್ಲಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಮಾಜಿ ಬಿಜೆಪಿ ಶಾಸಕ ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಕಾರಣದಿಂದಾಗಿ ಪವಿತ್ರ ನೀರನ್ನು ಸಂಗ್ರಹಿಸಲು ಅಧಿಕ ಸಮಯ ಬೇಕಾಯಿತು ಎಂದವರು ಹೇಳಿದ್ದಾರೆ. ಈ ಕಾರ್ಯಕ್ಕೆ ಹಿಂದೂಗಳು ಮಾತ್ರವಲ್ಲದೆ ವಿಶ್ವದ ಏಳು ಖಂಡಗಳ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಯಹೂದಿಗಳು ಸಹಕಾರ ನೀಡಿದ್ದಾರೆ. ಇದೊಂದು ಐತಿಹಾಸಿಕ ಮತ್ತು ಮರೆಯಲಾಗದ ನೆನಪು ಎಂದು ಬಿಜೆಪಿ ನಾಯಕ ಬಣ್ಣಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ವಿಶ್ವ ಹಿಂದೂ ಪರಿಷತ್ತಿನ ಧರ್ಮದರ್ಶಿ ದಿನೇಶ್ ಚಂದ್ರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ರಾಮಲಾಲ್ ಮತ್ತು ಇಂದ್ರೇಶ್ ಕುಮಾರ್, ಮಾಜಿ ಸೇನಾ ಮುಖ್ಯಸ್ಥ ಜನರಲ್ ಜೆ.ಜೆ. ಸಿಂಗ್ ಮತ್ತು ಜೈನ್ ಆಚಾರ್ಯ ಲೋಕೇಶ್ ಉಪಸ್ಥಿತರಿದ್ದರು.