ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿ ಎರಡು ವರ್ಷಗಳೇ ಕಳೆದಿದ್ದು, ಶೇ.40ರಷ್ಟು ಕಾಮಗಾರಿ ಈಗಾಗ್ಲೇ ಪೂರ್ಣಗೊಂಡಿದೆ.
2023ರ ಡಿಸೆಂಬರ್‌ನಲ್ಲಿ ರಾಮಮಂದಿರ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ. ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೇವಾಲಯದ ಸುತ್ತಲಿನ ರಸ್ತೆಗಳನ್ನು ಸುಧಾರಿಸಲು, ನಿರ್ಮಾಣ ಮತ್ತು ಕೆಡವುವ ಚಟುವಟಿಕೆಗಳು ಸಹ ಭರದಿಂದ ಸಾಗುತ್ತಿವೆ.
“ದೇಗುಲ ನಿರ್ಮಾಣ ಕಾಮಗಾರಿ ಶೇ.40ರಷ್ಟು ಪೂರ್ಣಗೊಂಡಿದೆ. ಸ್ತಂಭ ನಿರ್ಮಾಣ ಕಾರ್ಯ ಶೇ.80ರಷ್ಟಾಗಿದೆ. 2023ರ ಡಿಸೆಂಬರ್‌ನಿಂದ ದೇವಸ್ಥಾನದಲ್ಲಿ ದರ್ಶನ ಆರಂಭವಾಗುವ ಸಾಧ್ಯತೆ ಇದೆ” ಎಂದು ರೈ ಹೇಳಿದ್ದಾರೆ. ದೇಶದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯ 2024 ರಲ್ಲಿ ನಡೆಯಲಿದೆ. ಚುನಾವಣೆಗೂ ಮುನ್ನವೇ ರಾಮಮಂದಿರ ಲೋಕಾರ್ಪಣೆಗೊಳ್ಳಬಹುದು.
ಕನಿಷ್ಠ ಒಂದು ಸಾವಿರ ವರ್ಷಗಳ ಕಾಲ ದೇವಾಲಯದ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮಣ್ಣಿನಲ್ಲಿ ಬೃಹತ್ ಅಡಿಪಾಯವನ್ನು ಹಾಕಲಾಗುತ್ತಿದೆ.ದೇವಾಲಯದ ವಿಸ್ತೀರ್ಣ ಮತ್ತು ಅದರ ಪ್ರಾಂಗಣ ಸೇರಿದಂತೆ ಒಟ್ಟು ಎಂಟು ಎಕರೆ ಜಾಗವನ್ನು ಸುತ್ತುವರಿದು ಆಯತಾಕಾರದ ಎರಡು ಅಂತಸ್ತಿನ ಪರಿಕ್ರಮ ರಸ್ತೆಯನ್ನು ನಿರ್ಮಿಸಲಾಗುವುದು. ಪೂರ್ವ ಭಾಗದಲ್ಲಿ ಮರಳುಗಲ್ಲಿನಿಂದ ಮಾಡಿದ ಪ್ರವೇಶದ್ವಾರ ಇರಲಿದೆ. ದೇವಾಲಯದ ಗರ್ಭಗುಡಿಯೊಳಗೆ ರಾಜಸ್ಥಾನದ ಮಕ್ರಾನಾ ಬೆಟ್ಟಗಳಿಂದ ತಂದ ಬಿಳಿ ಅಮೃತಶಿಲೆಯನ್ನು ಬಳಸಲಾಗುವುದು. ಕಲ್ಲುಗಳ ಕೆತ್ತನೆ ಕಾರ್ಯ ಸಹ ನಡೆಯುತ್ತಿದೆ.
ರಾಮಮಂದಿರಕ್ಕೆ ಪೂಜೆ ಸಲ್ಲಿಸಲು ಅಯೋಧ್ಯೆಗೆ ಬರುವವರು ದೇವಾಲಯದ ನಿರ್ಮಾಣದಲ್ಲಿ ಬಳಸುವ ಕಲ್ಲುಗಳನ್ನು ಇರಿಸಲಾಗಿರುವ ಈ ಸ್ಥಳಕ್ಕೆ ಸಹ ಭೇಟಿ ನೀಡಲಿದ್ದಾರೆ. 2020ರ ಆಗಸ್ಟ್ 5 ರಂದು ಮಂದಿರ ನಿರ್ಮಾಣಕ್ಕೆ ಮೋದಿ ಭೂಮಿಪೂಜೆ ಮಾಡಿದ್ದರು. ನವೆಂಬರ್ 9, 2019 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಯೋಜನೆಯ ಪ್ರಕಾರ, ರಾಮಮಂದಿರದ ಸುತ್ತಮುತ್ತಲಿನ 70 ಎಕರೆ ಪ್ರದೇಶದಲ್ಲಿ ವಾಲ್ಮೀಕಿ, ಕೇವತ್, ಶಬರಿ, ಜಟಾಯು, ಸೀತಾ, ವಿಘ್ನೇಶ್ವರ (ಗಣೇಶ) ಮತ್ತು ಶೇಷಾವತಾರ (ಲಕ್ಷ್ಮಣ) ದೇವಾಲಯಗಳನ್ನು ಸಹ ನಿರ್ಮಿಸಲಾಗುವುದು.