ಬೆಂಗಳೂರು: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ತಾಯಿ ಸೀತಮ್ಮ ತಿಮ್ಮೇಗೌಡರಿಗೆ 94ನೇ ಹುಟ್ಟುಹಬ್ಬದ ಸಂಭ್ರಮ. ಅಮ್ಮನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮುಂದಾದ ಸಚಿವ ಸೋಮಶೇಖರ್, ಅಮ್ಮನ ಬಳಿ ಬಂದು ಹುಟ್ಟುಹಬ್ಬಕ್ಕೆ ಏನು ಬೇಕೆಂದು ಕೇಳಿದಾಗ ತಾಯಿ ಇಟ್ಟ ಬೇಡಿಕೆ ಏನು ಗೊತ್ತೆ? ಈ ಸ್ಟೋರಿ ಓದಿ.
ಸಚಿವ ಎಸ್.ಟಿ. ಸೋಮಶೇಖರ್, ತಾಯಿ ಸೀತಮ್ಮ ಅವರನ್ನು ಹುಟ್ಟುಹಬ್ಬಕ್ಕೆ ಏನು ಕೊಡಬೇಕೆಂದು ಕೇಳಿದಾಗ ನನಗೆ ಅಗತ್ಯವಿರುವುದೆಲ್ಲವನ್ನೂ ಪೂರೈಸಿದ್ದೀಯ. ಆದರೆ ನನಗೆ ಒಂದು ಆಸೆಯಿದೆ. ನಾನು ರಾಜಕೀಯ ನಾಯಕರಾದ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಭಿಮಾನಿ. ಹಾಗಾಗಿ ಅವರನ್ನು ಒಮ್ಮೆ ಭೇಟಿ ಮಾಡಬೇಕು ಎಂಬುದು ನನ್ನ ಮಹದಾಸೆ ಎಂದು ಹೇಳಿದ್ದಾರೆ.
ಡೇಟ್ ಗೆ ಬರುವ ಪುರುಷರು ಮನೆ ನೋಡ್ತಿದ್ದಂತೆ ಓಡಿ ಹೋಗ್ತಾರೆ…..! ಇನ್ನೂ ಸಿಂಗಲ್ ಆಗಿದ್ದಾಳೆ ಸುಂದರ ಮಹಿಳೆ
ಅಮ್ಮನ ಆಸೆ ಕೇಳಿದ ಸಚಿವರು ತಕ್ಷಣ ತಮ್ಮ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಅವರಿಗೆ ತಿಳಿಸಿ, ಎಸ್.ಎಂ. ಕೃಷ್ಣ ಅವರ ಬಳಿ ತಮ್ಮ ತಾಯಿ ಬೇಡಿಕೆ ತಿಳಿಸುವಂತೆ ಸೂಚಿಸುತ್ತಾರೆ. ಅಲ್ಲದೇ ತಮ್ಮ ಮನೆಗೆ ಯಾವಾಗ ? ಯಾವ ಸಮಯಕ್ಕೆ ಸಚಿವರ ತಾಯಿಯವರನ್ನು ಕರೆದುಕೊಂಡು ಬರಬೇಕೆಂದು ಕೇಳುತ್ತಾರೆ. ಇದನ್ನು ಕೇಳಿದ ಎಸ್.ಎಂ. ಕೃಷ್ಣ, ಸಚಿವರ ತಾಯಿಯವರು ನನಗಿಂತ ಹಿರಿಯರು. ಹಾಗಾಗಿ ಅವರು ನಮ್ಮ ಮನೆಗೆ ಬರುವುದು ಉಚಿತವಲ್ಲ. ಹಾಗಾಗಿ ನಾನೇ ಅವರ ಮನೆಗೆ ಬಂದು ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳುತ್ತಾರೆ.
ಅದರಂತೆ ಮಂಗಳವಾರ ರಾತ್ರಿ ಸಚಿವ ಎಸ್.ಟಿ. ಸೋಮಶೇಖರ್ ಅವರ ಸದಾಶಿವನಗರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಭೇಟಿ ನೀಡಿ ಸಚಿವರ ತಾಯಿಯವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಈ ಮೂಲಕ ಸೀತಮ್ಮವರ ಹಲವು ವರ್ಷಗಳ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಬೇಕು ಎಂಬ ಅಭಿಮಾನ ಈಡೇರಿದಂತಾಗಿದೆ. ಇತ್ತ ತಮ್ಮ ತಾಯಿಯ ಕೋರಿಕೆಯನ್ನು ನೆರವೇರಿಸಲು ಕೃಷ್ಣ ಅವರೇ ತಮ್ಮ ಮನೆಗೆ ಆಗಮಿಸಿದ್ದಕ್ಕೆ ಸಚಿವರಾದ ಸೋಮಶೇಖರ್ ಸಹ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಚಿವರ ಪತ್ನಿ ರಾಧಾ ಸೋಮಶೇಖರ್ ಹಾಗೂ ಪುತ್ರ ನಿಶಾಂತ್ ಸೋಮಶೇಖರ್ ಅವರು ಕೂಡ ಉಪಸ್ಥಿತರಿದ್ದರು.