ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಿದ್ದ ಕುಟುಂಬವೊಂದು ಕಾನ್ಪುರದಲ್ಲಿದ್ದ ತಮ್ಮ ಮನೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ನೋಡುತ್ತಿದ್ದ ವೇಳೆಯಲ್ಲಿ ಕಳ್ಳರು ಮನೆಗೆ ಬಂದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಾನ್ಪುರ ಪೊಲೀಸ್ ಠಾಣೆಗೆ ಕೂಡಲೇ ಮಾಹಿತಿ ನೀಡಿದ ಕುಟುಂಬ ಕಳ್ಳರನ್ನು ಹಿಡಿಯುವಂತೆ ಕೋರಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಾನ್ಪುರದಲ್ಲಿರುವ ನಿವಾಸಕ್ಕೆ ಆಗಮಿಸಿ ಕಳ್ಳತನ ನಡೆಸುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ನ್ಯೂಜೆರ್ಸಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ 38 ವರ್ಷದ ವಿಜಯ್ ಅವಸ್ಥಿ ಅವರ ಮೊಬೈಲ್ ಫೋನ್ಗೆ ಸೋಮವಾರ ರಾತ್ರಿ ಅಲರ್ಟ್ ಮೆಸೇಜ್ ಬಂದಿತ್ತು. ಚಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾಮ್ ನಗರದಲ್ಲಿರುವ ತಮ್ಮ ನಿವಾಸಕ್ಕೆ ವಿಜಯ್ ಸಿಸಿ ಟಿವಿ ಹಾಗೂ ಸೆನ್ಸಾರ್ಗಳನ್ನು ಅಳವಡಿಸಿದ್ದರು. ಇದು ವಿಜಯ್ ಅವಸ್ಥಿ ಅವರಿಗೆ ಮಾಹಿತಿಯನ್ನು ನೀಡಿತ್ತು.
ನೇರ ದೃಶ್ಯಾವಳಿಗಳನ್ನು ವೀಕ್ಷಿಸುತ್ತಿದ್ದ ವೇಳೆಯಲ್ಲಿ ಕಳ್ಳರು ಮನೆಯ ಬೀಗವನ್ನು ಮುರಿದು ಒಳಗೆ ಹೋಗುತ್ತಿದ್ದುದನ್ನು ವಿಜಯ್ ಕಂಡಿದ್ದಾರೆ. ಕೂಡಲೇ ಮೈಕ್ ಆಪ್ಶನ್ ಮೂಲಕ ಕಳ್ಳರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ ಇದಕ್ಕೆ ಕಳ್ಳರು ಬೆದರಿರಲಿಲ್ಲ. ಬದಲಾಗಿ ಸಿಸಿ ಕ್ಯಾಮರಾವನ್ನೇ ಮುರಿದು ಹಾಕಿದ್ದಾರೆ.
ಇದಾದ ಬಳಿಕ ವಿಜಯ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಲರ್ಟ್ ಆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.