ಈ ಆನ್ ಲೈನ್ ಶಾಪಿಂಗ್ ಕೆಲವೊಮ್ಮೆ ಆಭಾಸಕ್ಕೀಡು ಮಾಡುತ್ತದೆ, ಇನ್ನೂ ಕೆಲವೊಮ್ಮೆ ಆರ್ಡರ್ ಮಾಡಿದ ಉತ್ಪನ್ನಗಳಿಗೆ ಬದಲಾಗಿ ಕಲ್ಲು ತುಂಬಿದ್ದ ಅಥವಾ ಇನ್ನಾವುದೋ ವಸ್ತುವನ್ನು ತುಂಬಿದ ಪ್ಯಾಕೇಟ್ ಗಳನ್ನು ಗ್ರಾಹಕರು ಸ್ವೀಕರಿಸಿದ ಘಟನೆಗಳು ಅನೇಕ ಬಾರಿ ನಡೆದಿವೆ.
ದುಬಾರಿ ಮೊಬೈಲ್ ಫೋನ್ ಆರ್ಡರ್ ಮಾಡಿದ ಗ್ರಾಹಕರಿಗೆ ವಿತರಕರು ಕಲ್ಲು ತುಂಬಿದ್ದ ಪ್ಯಾಕೇಟ್ ಕೊಟ್ಟಿದ್ದುದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದನ್ನು ನಾವು ನೋಡಿದ್ದೇವೆ.
ಇದೀಗ ಇಂತಹದ್ದೇ ಮತ್ತೊಂದು ವಿಲಕ್ಷಣ ಘಟನೆಗೆ ಅಮೇಜಾನ್ ಕಾರಣವಾಗಿದೆ. ಇಲ್ಲೊಬ್ಬ ಮಹಿಳೆ ಲೆದರ್ ಚೇರ್ ಅನ್ನು ಆರ್ಡರ್ ಮಾಡಿದ್ದರು. ಚೇರ್ ಏನೋ ಬಂತು. ಆದರೆ, ಅದರೊಂದಿಗೆ ಇದ್ದ ವಸ್ತು ಆ ಮಹಿಳೆ ಮತ್ತು ಅದನ್ನು ನೋಡಿದವರಿಗೆಲ್ಲಾ ಸಿಟ್ಟು ತರಿಸಿದೆ.
ಹಾಗಾದರೆ, ಆ ಚೇರ್ ನ ಜೊತೆಗಿದ್ದ ವಸ್ತುವಾದರೂ ಏನು ಎಂಬ ಕುತೂಹಲ ನಿಮ್ಮದೇ? ಇಲ್ಲಿದೆ ನೋಡಿ ಉತ್ತರ:- ಆ ಚೇರ್ ಜೊತೆ ರಕ್ತದ ಸ್ಯಾಂಪಲ್ ಸಂಗ್ರಹಿಸಿಡುವ ಸಣ್ಣ ಬಾಟಲಿ ಇತ್ತು!
ಇಷ್ಟಕ್ಕೇ ಹೌಹಾರಬೇಡಿ. ಅದರಲ್ಲಿ ಬಾಟಲಿ ಇತ್ತು. ಆ ಬಾಟಲಿಯೊಳಗೆ ರಕ್ತವೂ ಇತ್ತು!!
ಇದನ್ನು ಜೆನ್ ಎಂಬ ಮಹಿಳೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾನು ಅಮೇಜಾನ್ ನಲ್ಲಿ ಲೆದರ್ ಚೇರ್ ಆರ್ಡರ್ ಮಾಡಿದ್ದೆ. ಚೇರ್ ಬಂತು. ಅದರೊಂದಿಗೆ ರಕ್ತ ತುಂಬಿದ್ದ ಬಾಟಲಿಯೂ ಬಂದಿದೆ. ಇದನ್ನು ಕಂಡು ನನಗೆ ಆಶ್ಚರ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.
ಆರಂಭದಲ್ಲಿ ಅಮೇಜಾನ್ ಸಂಸ್ಥೆಯ ಸಿಬ್ಬಂದಿಗೆ ಈ ವಿಚಾರವನ್ನು ತಿಳಿಸಿದೆ. ಈ ಬಗ್ಗೆ ವಿಚಾರಿಸುತ್ತೇವೆ ಎಂದು ಹೇಳಿದ ಸಿಬ್ಬಂದಿಯಿಂದ ಮತ್ತೆ ಉತ್ತರವಾಗಲೀ ಅಥವಾ ಯಾವುದೇ ಪ್ರತಿಕ್ರಿಯೆಯೂ ಇಲ್ಲ ಎಂದೂ ಅವರು ಬರೆದುಕೊಂಡಿದ್ದಾರೆ.
ಈ ವಿಲಕ್ಷಣ ಘಟನೆಯ ವಿಡಿಯೋವನ್ನು 530ಕೆ ಜನರು ವೀಕ್ಷಿಸಿದ್ದಾರೆ. ಇದೊಂದು ಅಚ್ಚರಿ ಮತ್ತು ಗಂಭೀರವಾದ ವಿಚಾರವಾಗಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.