ಅಮೇಜಾನ್‌ನ ದಟ್ಟವಾದ ಕಾಡುಗಳನ್ನು ಭೂಮಿಯ ಶ್ವಾಸಕೋಶ ಎಂದೇ ಕರೆಯಲಾಗುತ್ತದೆ. ಅಮೇಜಾನ್ ಅರಣ್ಯದಲ್ಲಿರುವ ಅತ್ಯಂತ ಎತ್ತರದ ಮರ ಕೊನೆಗೂ ಪತ್ತೆಯಾಗಿದೆ. ವಿಶ್ವದಲ್ಲೇ ಅತಿ ಎತ್ತರದ ಮರ ಇದು. ಇದನ್ನು ಕಂಡು ಹಿಡಿಯುವುದು ಸುಲಭವಾಗಿರಲಿಲ್ಲ. ಸುಮಾರು ಮೂರು ವರ್ಷಗಳ ಸತತ ಪ್ರಯತ್ನದ ನಂತರ ವಿಜ್ಞಾನಿಗಳ ತಂಡ 25 ಅಂತಸ್ತಿನ ಕಟ್ಟಡದಷ್ಟು ಎತ್ತರವಿರುವ ಈ ಮರವನ್ನು ಪತ್ತೆ ಮಾಡಿದೆ.
ಸಂಶೋಧಕರು ಈ ಬೃಹತ್ ಎಲೆಗಳು, ಬುಡದಲ್ಲಿರುವ ಮಣ್ಣು ಸೇರಿದಂತೆ ಇತರ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ ಈ ಮರ ಸುಮಾರು 400 ರಿಂದ 600 ವರ್ಷಗಳಷ್ಟು ಹಳೆಯದು. ಮರದ ಎತ್ತರ 88.5 ಮೀಟರ್, ಅಂದರೆ 290 ಅಡಿ. ದಪ್ಪವು ಸುಮಾರು 9.9 ಮೀ ಅಂದರೆ 32 ಅಡಿಗಳಷ್ಟಿದೆ. ಈ ಪ್ರದೇಶದಲ್ಲೇಕೆ ದೊಡ್ಡ ಮತ್ತು ಎತ್ತರದ ಮರಗಳು ಇವೆ ಎಂದು ಕಂಡುಹಿಡಿಯಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.
ಅದೇ ಸಮಯದಲ್ಲಿ ಈ ಮರಗಳು ಒಟ್ಟು ಎಷ್ಟು ಇಂಗಾಲವನ್ನು ಸಂಗ್ರಹಿಸುತ್ತವೆ ಎಂಬುದನ್ನು ಸಹ ಖಚಿತಪಡಿಸಲಾಗುತ್ತಿದೆ. ಜಗತ್ತಿನ ಅತ್ಯಂತ ಎತ್ತರದ ಮರ ಉತ್ತರ ಬ್ರೆಜಿಲ್‌ನ ಇರತಾಪುರ್ ನದಿಯ ಸಮೀಪವಿರುವ ನೇಚರ್ ರಿಸರ್ವ್‌ನಲ್ಲಿದೆ. ಏಂಜೆಲಿಮ್ ವರ್ಮೆಲೋ ಎಂಬ ಹೆಸರಿನ ಈ ಮರದ ವೈಜ್ಞಾನಿಕ ಹೆಸರು ಡಿನಿಜಿಯಾ ಎಕ್ಸೆಲ್ಸಾ.
2019ರಲ್ಲಿ ಉಪಗ್ರಹ ಚಿತ್ರಗಳಲ್ಲಿ ಸಂಶೋಧಕರು ಈ ದೈತ್ಯ ಮರವನ್ನು ಮೊದಲು ಗುರುತಿಸಿದ್ದಾರೆ. ಶಿಕ್ಷಣ ತಜ್ಞರು, ಪರಿಸರವಾದಿಗಳು ಮತ್ತು ಸ್ಥಳೀಯ ಮಾರ್ಗದರ್ಶಕರನ್ನೊಳಗೊಂಡ 19 ಜನರ ತಂಡ ಕಿಲೋಮೀಟರ್‌ಗಟ್ಟಲೆ ನಡೆದು ಸಾಕಷ್ಟು ಪರಿಶ್ರಮದ ಬಳಿಕ ಎತ್ತರದ ಮರವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.