
ರಾಜ್ಯ ಸರ್ಕಾರ ಅಮೃತ ಜ್ಯೋತಿ ಯೋಜನೆ ಅಡಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತಿದೆ.
ಈ ಕುರಿತಂತೆ ಈಗಾಗಲೇ ಆದೇಶ ಹೊರಡಿಸಲಾಗಿದ್ದು, ಸೌಲಭ್ಯ ಪಡೆಯಲು ಫಲಾನುಭವಿಗಳು ಏಪ್ರಿಲ್ 30ರ ಅಂತ್ಯಕ್ಕೆ ಬಾಕಿ ಇರುವ ವಿದ್ಯುತ್ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿರಬೇಕು. ಅಲ್ಲದೆ ಮಾಸಿಕ ವಿದ್ಯುತ್ ಬಳಕೆ ಗರಿಷ್ಠ 250 ಯೂನಿಟ್ ಮೀರಬಾರದು.
ಈ ಸೌಲಭ್ಯವನ್ನು ಪಡೆಯಲು ಬಯಸುವ ಫಲಾನುಭವಿಗಳು ಬಿಪಿಎಲ್ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ ದಾಖಲೆಯನ್ನು ನೀಡಬೇಕಾಗಿದ್ದು, 75 ಯೂನಿಟ್ ವರೆಗೆ ಬಳಕೆಯ ವಿದ್ಯುತ್ ಶುಲ್ಕವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಸುವಿಧಾ ಪೋರ್ಟಲ್ ಅಥವಾ ಸಮೀಪದ ವಿದ್ಯುತ್ ಉಪ ವಿಭಾಗ ಅಥವಾ ಶಾಖಾ ಕಚೇರಿಗೆ ಭೇಟಿ ನೀಡಿ ಆನ್ಲೈನ್ ನಲ್ಲಿ ನೋಂದಾಯಿಸುವ ಮೂಲಕ ಇದನ್ನು ಪಡೆಯಬಹುದಾಗಿದೆ.