ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾದರಕ್ಷೆಗಳನ್ನು ತರಲು ಧಾವಿಸಿರುವ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಕಂದರಾಬಾದ್‌ನ ಉಜ್ಜೈನಿ ಮಹಾಕಾಳಿ ದೇವಾಲಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದರು.
ಈ ವೇಳೆ ಸಂಜಯ್ ಕೂಡ ಅಮಿತ್ ಶಾಗೆ ಸಾಥ್ ನೀಡಿದ್ದಾರೆ. ದೇವಾಲಯದಿಂದ ಅಮಿತ್ ಶಾ ಹೊರಬೀಳುತ್ತಿದ್ದಂತೆ ಜೊತೆಗಿದ್ದ ಸಂಜಯ್ ಓಡಿ ಹೋಗಿ ಅವರ ಪಾದರಕ್ಷೆಗಳನ್ನು ಹೊತ್ತು ತಂದಿದ್ದಾರೆ. ಅಮಿತ್ ಶಾ ಅವರ ಕಾಲಿನ ಬಳಿ ಇರಿಸಿದ್ದಾರೆ.
ಈ ಘಟನೆ ಟಿಆರ್‌ಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಆಹಾರವಾಗಿಬಿಟ್ಟಿದೆ. ಟಿಆರ್‌ಎಸ್ ಮತ್ತು ಕಾಂಗ್ರೆಸ್ ನಾಯಕರು, ಸಂಜಯ್ ಅವರನ್ನು ದೆಹಲಿ ಮತ್ತು ಗುಜರಾತ್‌ನ ಬಿಜೆಪಿ ಮುಖಂಡರ ‘ಗುಲಾಮ’ ಎಂದು ಬಣ್ಣಿಸಿದ್ದಾರೆ. ತೆಲಂಗಾಣದ ಸ್ವಾಭಿಮಾನವನ್ನು ಕಾಪಾಡುವಂತೆ ಕರೆ ನೀಡಿದ್ದಾರೆ. ಟಿಆರ್‌ಎಸ್ ನಾಯಕರು, ಸಿಎಂ ಚಂದ್ರಶೇಖರ್ ರಾವ್ ಅವರ ಗುಲಾಮರಾಗಿದ್ದಾರೆ ಅಂತಾ ಆಗಾಗ ಸಂಜಯ್ ಆರೋಪಿಸುತ್ತಿದ್ದರು. ಈಗ ಅವರೇ ಖುದ್ದು ಸಾಕಷ್ಟು ಟ್ರೋಲ್‌ಗೆ ತುತ್ತಾಗುತ್ತಿದ್ದಾರೆ.
ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಟ್ವೀಟ್ ಮಾಡಿ, ತೆಲಂಗಾಣದ ಜನರು ‘ದೆಹಲಿ ಪಾದರಕ್ಷೆಯನ್ನು ಹೊತ್ತೊಯ್ಯುವ ಗುಜರಾತಿ ಗುಲಾಮರನ್ನು ನೋಡ್ತಿದ್ದಾರೆ ಅಂತಾ ಟ್ವೀಟ್ ಮಾಡಿದ್ದಾರೆ. ಹಿಂದುಳಿದ ವರ್ಗದ ನಾಯಕರಿಗೆ ಬಿಜೆಪಿಯಲ್ಲಿರುವ ಸ್ಥಾನಮಾನ ಏನು ಎಂಬುದರ ಸತ್ಯ ಇದು ಅಂತಾ ಕಾಂಗ್ರೆಸ್ ಟೀಕೆ ಮಾಡಿದೆ. ಇಂತಹ ಹತ್ತಾರು ಟ್ವೀಟ್‌ಗಳು ಬಂಡಿ ಸಂಜಯ್ ಅವರನ್ನ ಟಾರ್ಗೆಟ್ ಮಾಡಿವೆ.
ಅಮಿತ್ ಶಾ ಭಾನುವಾರ ತೆಲಂಗಾಣಕ್ಕೆ ಭೇಟಿ ನೀಡಿದ್ದರು. ಸಿಕಂದರಾಬಾದ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅವರು ಮುನುಗೋಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಪ್ರಚಾರಕ್ಕೆ ಔಪಚಾರಿಕವಾಗಿ ಚಾಲನೆ ನೀಡಿ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.