ಉತ್ತರ ಪ್ರದೇಶದ ವಿಧಾನಸಭೆ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 156 ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಇವರಲ್ಲಿ 121 ಮಂದಿ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.
ಫೆಬ್ರವರಿ 10ರಂದು 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಉತ್ತರ ಪ್ರದೇಶ ಚುನಾವಣೆಯ ಮೊದಲನೇ ಹಂತದ ಮತದಾನ ನಡೆಯಲಿದೆ. ಈ 615 ಅಭ್ಯರ್ಥಿಗಳ ಪೈಕಿ 156 ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಕೇಸುಗಳನ್ನು ಘೋಷಣೆ ಮಾಡಿದ್ದಾರೆ. 121 ಅಭ್ಯರ್ಥಿಗಳ ಮೇಲೆ ಗಂಭೀರವಾದ ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.
ಇದು ಮಾತ್ರವಲ್ಲದೇ ಕನಿಷ್ಟ 12 ಅಭ್ಯರ್ಥಿಗಳು ಮಹಿಳೆಯರ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ ಆರ್ಎಲ್ಡಿ ಪಕ್ಷದಿಂದ ಬುಲಂದರ್ ಶಹರ್ನಿಂದ ಸ್ಪರ್ಧಿಸುತ್ತಿರುವ ಮೊಹಮ್ಮದ್ ಯೂನಸ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಒಟ್ಟು ಆರು ಮಂದಿ ಅಭ್ಯರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣವು ದಾಖಲಾಗಿದೆ. 30 ಅಭ್ಯರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಕೊಲೆ ಯತ್ನ ಪ್ರಕರಣಗಳು ದಾಖಲಾಗಿದೆ ಎಂದು ಘೋಷಣೆಯಾಗಿದೆ.