
ಮೇ 10ರಂದು ನಡೆದ ವಿಧಾನಸಭಾ ಚುನಾವಣೆ ಫಲಿತಾಂಶ ಶನಿವಾರದಂದು ಹೊರ ಬಿದ್ದಿದ್ದು, ಮತದಾರ ಪ್ರಭುಗಳು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. 224 ಕ್ಷೇತ್ರಗಳ ಪೈಕಿ 135 ರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಯಾದಗಿರಿ ಜಿಲ್ಲೆ ಸುರಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅಭೂತಪೂರ್ವ ಗೆಲುವು ಸಾಧಿಸಿದರೂ ಕೂಡ ಈ ಸಂಭ್ರಮವನ್ನು ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ.
ಇದಕ್ಕೆ ಕಾರಣವಾಗಿದ್ದು ರಾಜಾ ವೆಂಕಟಪ್ಪ ನಾಯಕ ಅವರ ಕುಟುಂಬದಲ್ಲಿ ಸಂಭವಿಸಿದ್ದ ಒಂದು ಸಾವು. ಇವರ ಸಹೋದರ ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಅವರ ಪುತ್ರ ರಾಜಾ ರೂಪಕುಮಾರ ನಾಯಕ (ಬಂಟಿ ಧಣಿ) ಅನಾರೋಗ್ಯದಿಂದ ಶುಕ್ರವಾರ ಮೃತಪಟ್ಟಿದ್ದ ಕಾರಣ ತಮ್ಮ ಗೆಲುವು ಘೋಷಣೆಯಾದ ತಕ್ಷಣ ಸುರಪುರಕ್ಕೆ ತೆರಳಿದ ರಾಜಾ ವೆಂಕಟಪ್ಪ ನಾಯಕ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸಹೋದರನ ಪುತ್ರನ ಸಾವಿಗೆ ಕಣ್ಣೀರಿಟ್ಟಿದ್ದಾರೆ.