ಕೋವಿಡ್ -19 ನಿರ್ಬಂಧಗಳಿಂದಾಗಿ ಹಲವರ ಮದುವೆ ದಿನಾಂಕಗಳು ಬಹಳಷ್ಟು ಮುಂದೆ ಹೋಗಿರುವಂತಹ ಘಟನೆಗಳು ನಡೆದಿರೋದು ನಿಮಗೆ ಗೊತ್ತೇ ಇದೆ. ಹೀಗೆಯೆ ಕೆಲ್ಲಿ ಎಂಬಾಕೆ ಹಿಂದಿನ ಮೂರು ವಿವಾಹದ ದಿನಾಂಕಗಳನ್ನು ಮುಂದೂಡಿದ ನಂತರ ಈ ವರ್ಷ ಮಾರ್ಚ್ 31 ರಂದು ವಿವಾಹವಾಗಿದ್ದಾರೆ.
ಪ್ರತಿಯೊಬ್ಬ ಹೆಣ್ಮಕ್ಕಳಿಗೂ ತನ್ನ ಮದುವೆಗೆ ಭರ್ಜರಿಯಾಗಿ ಸಿದ್ಧಳಾಗಬೇಕು ಅನ್ನೋ ಕನಸಿರುತ್ತದೆ. ತನ್ನ ಉಡುಪು, ಅಲಂಕಾರದಲ್ಲಿ ಬಹಳ ಸುಂದರವಾಗಿ ಕಾಣಬೇಕೆಂಬ ಆಸೆಯಿರುತ್ತದೆ. ಹಾಗೆಯೇ ಕೆಲ್ಲಿ ತನ್ನ ಮದುವೆಗೆ ಪರಿಪೂರ್ಣವಾದ ಉಡುಪನ್ನು ಬಯಸಿದ್ದಳು. ಅಲ್ಲದೆ, ಆಕೆಯ ವರನ ಕನಸಿನ ರಾಜಕುಮಾರಿಯಂತೆ ಕಾಣಿಸಬೇಕೆಂದು ನಿರೀಕ್ಷಿಸಿದ್ದಳು.
ಇದಕ್ಕಾಗಿ ರಿಕಿ ದಲಾಲ್ ವಿನ್ಯಾಸಗೊಳಿಸಿದ 2.5 ಲಕ್ಷ ರೂ. ಬೆಲೆಯ ಲಿರಿ ಸಾರಾ ಡ್ರೆಸ್ ಅನ್ನು ಸಿ ಬ್ರೈಡಲ್ ಬೊಟಿಕ್‌ನಲ್ಲಿ ಗುರುತಿಸಿದ್ದಳು. ಅಳತೆಗೆ ತಕ್ಕ ಉಡುಪನ್ನು ಆರ್ಡರ್ ಮಾಡಿದ್ದಳು. ಮದುವೆಗೆ ಆರರಿಂದ ಎಂಟು ವಾರಗಳ ಮೊದಲೇ ಈ ಉಡುಪು ತನ್ನ ಕೈಗೆ ಸಿಗುತ್ತೆ ಅನ್ನೋ ಖುಷಿಯಲ್ಲಿದ್ದಳು.
ಆದರೆ, ಮದುವೆಗೆ ನಾಲ್ಕೇ ವಾರ ಬಾಕಿ ಇರುವಾಗ ಡ್ರೆಸ್ ಇನ್ನೂ ಬಂದಿಲ್ಲ ಎಂದು ಕೆಲ್ಲಿ ಗಾಬರಿಯಾಗತೊಡಗಿದಳು. ಈ ಬಗ್ಗೆ ಆಕೆ ಬಟ್ಟೆ ಅಂಗಡಿಯನ್ನು ನಿರಂತರವಾಗಿ ಸಂಪರ್ಕಿಸಿದ್ದಾಳೆ. ನಂತರ, ಮದುವೆಗೆ ಮೂರು ವಾರಗಳ ಮೊದಲು ಕೆಲ್ಲಿಗೆ ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್ ಗಡಿಯಲ್ಲಿ ತನ್ನ ಉಡುಗೆ ಸಿಲುಕಿಕೊಂಡಿದೆ ಎಂದು ಹೇಳಲಾಯಿತು.
ರಿಕಿ ದಲಾಲ್, ಡ್ರೆಸ್ ಡಿಸೈನರ್, ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ. ಆದರೆ, ಉಕ್ರೇನ್‌ನಲ್ಲಿ ಉಡುಪುಗಳನ್ನು ತಯಾರಿಸುವ ಅಂಗಡಿಯನ್ನು ಹೊಂದಿದ್ದಾರೆ. ಇದರಿಂದ ಆಕೆಯ ಆತಂಕ ಮತ್ತಷ್ಟು ಹೆಚ್ಚಾಗಿತ್ತು. ಅಂತೂ ಇಂತೂ ಕೊನೆಗೆ ಮದುವೆಗೆ ಒಂದು ವಾರ ಇರಬೇಕಾದ್ರೆ ಆಕೆಯ ಕನಸಿನ ಉಡುಗೆ ಸಿಕ್ಕಿದೆ.
ಕೆಲ್ಲಿ ತನ್ನ ಕನಸಿನ ಉಡುಪನ್ನು ಹಾಕಿದಾಗ, ಅವಳು ಆಘಾತಕ್ಕೊಳಗಾಗಿದ್ದಾಳೆ. ಏಕೆಂದರೆ ಅವಳು ಆರ್ಡರ್ ಮಾಡಿದ್ದಕ್ಕಿಂತ ಉಡುಪು ಮೂರರಷ್ಟು ದೊಡ್ಡದಾಗಿತ್ತು. ಇದು ಆಲೂಗಡ್ಡೆಯ ಚೀಲದಂತೆ ಕಾಣುತ್ತಿತ್ತು ಎಂದು ಆಕೆ ಬೇಸರ ವ್ಯಕ್ತಪಡಿಸಿದ್ದಾಳೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, ತೂಕವನ್ನು ಕಳೆದುಕೊಂಡಿದ್ದಕ್ಕೆ ಉಡುಪು ದೊಡ್ಡದಾಗಿದೆ ಎಂದು ಅಂಗಡಿಯವರು ಉತ್ತರಿಸಿದ್ದಾರೆ. ಈ ನೆಪವನ್ನು ಆಕೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾಳೆ.
ನಂತರ ಕೆಲ್ಲಿ ತನ್ನ ಉಡುಪಿನ ಗಾತ್ರವನ್ನು ಬದಲಾಯಿಸಬೇಕಾಗಿತ್ತು. ಅದಕ್ಕಾಗಿ ಅವಳು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿತ್ತು. ಆದರೆ, ಬದಲಾವಣೆಯ ನಂತರವೂ ಅವಳು ಉಡುಪಿನಲ್ಲಿ ಸಾಕಷ್ಟು ಅನಾನುಕೂಲತೆಯನ್ನು ಅನುಭವಿಸಿದ್ದಾಳೆ. ಮದುವೆಯಂತಹ ಕಾರ್ಯಕ್ರಮಗಳಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬೇಡಿ ಎಂದು ಕೆಲ್ಲಿ ಇತರ ವಧುಗಳಿಗೆ ಸಲಹೆ ನೀಡಿದ್ದಾರೆ.