ತೆಲಂಗಾಣದಲ್ಲಿ ಅಂಧ ವೃದ್ಧರೊಬ್ಬ ಕಳೆದ 50 ವರ್ಷಗಳಿಂದ ಬಾವಿಗಳಲ್ಲಿ ಇಳಿದು ಪಂಪ್‌ಸೆಟ್ ರಿಪೇರಿ ಮಾಡುವ ಕೆಲಸ ಮಾಡ್ತಿದ್ದಾರೆ. ಈ ಅಪರೂಪದ ಸಾಹಸಿ ರಾಜಯ್ಯಗೆ ಈಗ 62 ವರ್ಷ. ಚಿಕ್ಕಂದಿನಲ್ಲಿ ಗಿಡಮೂಲಿಕೆ ಔಷಧ ಸೇವಿಸಿ ದೃಷ್ಟಿ ಕಳೆದುಕೊಂಡಿದ್ದರು. ಕರೀಂನಗರ ಜಿಲ್ಲೆಯ ಭೀಮದೇವರಪಲ್ಲಿ ಮಂಡಲದ ಮಾಣಿಕ್ಯಪುರ ಗ್ರಾಮದವರು.
ಕಣ್ಣುಗಳೇ ಕಾಣದಿದ್ದರಿಂದ ಭಿಕ್ಷೆ ಬೇಡಿ ಜೀವನ ಮಾಡುವಂತೆ ತಂದೆ ಅವರಿಗೆ ಸಲಹೆ ನೀಡಿದ್ದರು. ಆದರೆ ರಾಜಯ್ಯ ತಮ್ಮ ದೌರ್ಬಲ್ಯವನ್ನೇ ಸವಾಲಾಗಿ ತೆಗೆದುಕೊಂಡರು. ಅತ್ಯಂತ ಕಡಿಮೆ ಸಮಯದಲ್ಲಿ ಪಂಪ್‌ಸೆಟ್ ರಿಪೇರಿಯನ್ನು ಕಲಿತುಕೊಂಡ್ರು.
ಸುತ್ತಮುತ್ತಲಿನ ಹಳ್ಳಿಗಳಲ್ಲೆಲ್ಲ ಕೃಷಿ ಮೋಟಾರ್ ಪಂಪ್ ಸೆಟ್ ಮೆಕ್ಯಾನಿಕ್ ಆಗಿ ರಾಜಯ್ಯ ಜನಪ್ರಿಯರಾಗಿದ್ದಾರೆ. ಹಗ್ಗದ ಸಹಾಯದಿಂದ ಬಾವಿಗಿಳಿದು ಅಲ್ಲೇ ರಾಜಯ್ಯ ಪಂಪ್‌ಸೆಟ್ ದುರಸ್ತಿ ಮಾಡುತ್ತಾರೆ. ದೊಡ್ಡ ಸಮಸ್ಯೆಯೇನಾದರೂ ಇದ್ದರೆ ಮನೆಗೆ ತಂದು ರಿಪೇರಿ ಮಾಡಿ ಅದನ್ನು ಬಾವಿಯಲ್ಲಿ ಅಳವಡಿಸಿ ಬರ್ತಾರೆ. ಸ್ಥಳೀಯವಾಗಿ ಸರಿಪಡಿಸಲು ಸಾಧ್ಯವಾಗದೇ ಇದ್ದಲ್ಲಿ ಸಮೀಪದ ಹುಜೂರಾಬಾದ್ ಪಟ್ಟಣಕ್ಕೆ ತೆರಳಿ ಅಲ್ಲಿನ ಮೆಕ್ಯಾನಿಕ್‌ಗಳನ್ನು ಸಂಪರ್ಕಿಸಿ ಮೋಟಾರ್ ರಿಪೇರಿ ಮಾಡಿಸಿಕೊಡುತ್ತಾರೆ.
ರಾಜಯ್ಯ 10 ಸದಸ್ಯರೊಂದಿಗೆ ವಿಶೇಷ ಸಾಮರ್ಥ್ಯವುಳ್ಳವರಿಗಾಗಿ ‘ವೆಂಕಟೇಶ್ವರ ವಿಕಲಾಂಗುಲ ಸಂಗಮ’ವನ್ನು ಸಹ ಪ್ರಾರಂಭಿಸಿದ್ದಾರೆ. ಸಂಘದಲ್ಲಿ ಪ್ರತಿ ತಿಂಗಳು 100 ರೂಪಾಯಿ ಉಳಿತಾಯ ಮಾಡಬೇಕೆಂಬುದು ನಿಯಮ. ಈಗ ಸಂಘದ ಸದಸ್ಯರ ಉಳಿತಾಯ ತಲಾ 1 ಲಕ್ಷ ರೂಪಾಯಿ ಆಗಿದೆಯಂತೆ. ತುರ್ತು ಸಂದರ್ಭದಲ್ಲಿ ಅವರಿಗೆ ಸಾಲವೂ ಸಿಗುತ್ತದೆ. ರಾಜಯ್ಯ ಇತರ ವಿಕಲ ಚೇತನರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರುವುದು ವಿಶೇಷ. ರಾಜಯ್ಯನವರ ಬಗ್ಗೆ ಗ್ರಾಮಸ್ಥರು ಅಪಾರ ಅಭಿಮಾನ ಹೊಂದಿದ್ದಾರೆ.