ಬೀಜಿಂಗ್: ಇಡೀ ವಿಶ್ವಕ್ಕೇ ಕೊರೊನಾ ಎಂಬ ಮಹಾಮಾರಿ ನೀಡಿರುವ ಚೀನಾದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ ಮೀರಿದೆ. ಕೆಲ ದಿನ ತಣ್ಣಗಾಗಿದ್ದ ಈ ಮಹಾಮಾರಿ ಮತ್ತೆ ವಿಪರೀತಗೊಂಡಿದ್ದು ಚೀನಿಯರು ಬೆಚ್ಚಿಬಿದ್ದಿದ್ದಾರೆ. ಕೋವಿಡ್ ನಿರ್ಬಂಧಗಳು ಇಲ್ಲಿ ಹಲವೆಡೆ ಮುಂದುವರೆದಿದೆ.
ಅದೇ ಇನ್ನೊಂದೆಡೆ, ದೇಶದಲ್ಲಿ ಶೂನ್ಯ ಕೋವಿಡ್ ಗುರಿ ತಲುಪಲು ಮುಂದಾಗಿರುವ ಚೀನಾ ಇದಕ್ಕಾಗಿ ಇನ್ನಿಲ್ಲದ ಸಾಹಸ ಮಾಡಿ ಪ್ರಜೆಗಳನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಈ ದೇಶ, ಕೋವಿಡ್ ಪ್ರಜೆಗಳಿಗೆ ಹೇಗೆ ಹಿಂಸೆ ನೀಡುತ್ತಿದೆ ಎಂಬ ಭಯಾನಕ ವಿಡಿಯೋ ಒಂದು ವೈರಲ್ ಆಗಿದೆ. ಕೆಲ ದಿನಗಳ ಹಿಂದಷ್ಟೇ ಚೀನಾದ ಕೋವಿಡ್ ಐಸೋಲೇಷನ್ ಸೆಂಟರ್‌ಗಳ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ವಿಡಿಯೋ ಈಗ ಬೆಚ್ಚಿ ಬೀಳಿಸುವಂತಿದೆ.
ಈ ವಿಡಿಯೋವನ್ನು ಘಟನೆ ನಡೆದ ಸ್ಥಳದ ಬಿಲ್ಡಿಂಗ್ ಒಂದರ ಕಿಟಿಕಿಯಿಂದ ಸೆರೆ ಹಿಡಿಯಲಾಗಿದೆ. ಇದರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಅಧಿಕಾರಿಗಳು ಕೋವಿಡ್ ಸೋಂಕಿತನನ್ನು ಕ್ರೇನ್ ಮೂಲಕ ಸ್ಥಳಾಂತರ ಮಾಡುತ್ತಿದ್ದಾರೆ. ಇಂಥ ಹಿಂಸಾತ್ಮಕ ದೃಶ್ಯ ಎಂಥವರ ಕರುಳನ್ನೂ ಚುರುಕ್ ಎನಿಸುವಂತಿದೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ಚೀನಾದ ಕಟುನೀತಿಗೆ ಛೀಮಾರಿ ಹಾಕುತ್ತಿದ್ದಾರೆ.