ಸಾಕುಪ್ರಾಣಿಗಳೆಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಬೆಕ್ಕು, ಶ್ವಾನಗಳನ್ನು ಸಾಕುವವರು ತಮ್ಮ ಕುಟುಂಬದ ಭಾಗವಾಗಿ ಅವುಗಳನ್ನು ನೋಡಿಕೊಳ್ಳುತ್ತಾರೆ. ಕೆಲವರು ಅವುಗಳಿಗೆ ಸುಂದರವಾದ ಅಲಂಕಾರಿಕ ಬಟ್ಟೆಗಳನ್ನು ತೊಡಿಸುತ್ತಾರೆ. ಕೆಲವರು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಸಾಕುಪ್ರಾಣಿಗಳನ್ನು ಇಷ್ಟಪಡುತ್ತಾರೆ.
ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ ಬೆಕ್ಕಿಗೆ ಉಡುಗೊರೆ ನೀಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಷ್ಟಕ್ಕೂ ಆ ಉಡುಗೊರೆಯೇನು ಗೊತ್ತಾ..? ಮಹಿಳೆಯು ತನ್ನ ಬೆಕ್ಕಿಗೆ 100 ಗ್ರಾಂನ ಚಿನ್ನದ ಸರವನ್ನು ಅದರ ಕೊರಳಿಗೆ ಹಾಕಿದ್ದಾರೆ. ಜೊತೆಗೆ ಚಿನ್ನದ ಸರಕ್ಕೆ ದೊಡ್ಡ ಲಾಕೆಟ್ ಕೂಡ ಲಗತ್ತಿಸಲಾಗಿದೆ.
ಈ ಚಿನ್ನದ ಸರದ ಬೆಲೆ ಸುಮಾರು 4.5 ಲಕ್ಷ ರೂ. ಆಗಿವೆ. ಚಿನ್ನದ ಸರಪಳಿಯಲ್ಲಿ ಬೆಕ್ಕಿನ ಹೆಸರು, ಅದರ ಜನ್ಮದಿನವನ್ನು ಕೆತ್ತಲಾಗಿದೆ. ಮಾಲಕಿ ಹಲೀಜಾ ಪ್ರಕಾರ, ಸರಪಳಿಯನ್ನು ಬೆಕ್ಕಿಗೆ ಅಳವಡಿಸಲಾಗಿದೆ. ಹಾಗಾಗಿ ಇದನ್ನು ಬೇರೆಯವರು ಮಾರಾಟ ಮಾಡಲು ಅಥವಾ ಧರಿಸಲು ಸಾಧ್ಯವಿಲ್ಲ.
ದಂಪತಿಯು 32,000 ರೂ.ಗೆ ಬೆಕ್ಕನ್ನು ಖರೀದಿಸಿದ್ದಾರೆ. ಹಲೀಜಾ ಹೇಳುವಂತೆ ತನ್ನ ಜೀವನದಲ್ಲಿ ಬೆಕ್ಕು ಬಂದಾಗಿನಿಂದ ತಮ್ಮ ವ್ಯಾಪಾರವು ಅಭಿವೃದ್ಧಿ ಹೊಂದುತ್ತಿದೆ. ದಂಪತಿಯ ಮಕ್ಕಳೆಲ್ಲರೂ ಬೆಳೆದು ದೊಡ್ಡವರಾಗಿ ಬೇರೆಡೆಗೆ ಹೋದ ನಂತರ, ಬೆಕ್ಕಿನಿಂದ ಒಂಟಿತನ ದೂರವಾಯಿತು. ಇದರಿಂದಾಗಿ ಹಲೀಜಾ ಮತ್ತು ಆಕೆಯ ಪತಿ ಬೆಕ್ಕಿಗೆ ನೆಮ್ಮದಿಯ ಜೀವನಕ್ಕಾಗಿ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಸಾಧ್ಯವಾಗಿಸಿದ್ದಾರೆ. ಮನುಷ್ಯನೂ ಸಹ ಅಸೂಯೆಪಡುವಂತಹ ಅನೇಕ ವಿಶೇಷ ಸೌಲಭ್ಯಗಳನ್ನು ಬೆಕ್ಕಿಗೆ ನೀಡಲಾಗಿದೆ.
ಪ್ರತಿ ತಿಂಗಳು ಬೆಕ್ಕನ್ನು ಸ್ಪಾಗೆ ಕಳುಹಿಸುತ್ತಾರೆ. ದಂಪತಿಗಳು ತಮ್ಮ ಮನೆಯಲ್ಲಿ ಬೆಕ್ಕಿಗೆ ಪ್ರತ್ಯೇಕ ಕೋಣೆಯನ್ನು ಸಹ ನೀಡಿದ್ದಾರೆ. ಈ ಬೆಕ್ಕು ಥೈಲ್ಯಾಂಡ್‌ನಲ್ಲಿ ತಯಾರಿಸಿದ ಉಡುಪುಗಳನ್ನು ಮಾತ್ರ ಧರಿಸುತ್ತದೆ. ಮುದ್ದಿನ ಬೆಕ್ಕನ್ನು ಎಷ್ಟು ಪ್ರೀತಿ ಮಾಡುತ್ತಾರೆ ಎಂದರೆ ಅದು ಎಂದೂ ನೆಲದ ಮೇಲೆ ಕಾಲಿಡದಷ್ಟು ಕಾಳಜಿ ತೋರುತ್ತಾರೆ. ಅಲ್ಲದೆ ಅದನ್ನೆಂದೂ ಒಂಟಿಯಾಗಿ ಇರಲು ದಂಪತಿ ಬಿಡುವುದಿಲ್ಲ. ಇದನ್ನೆಲ್ಲಾ ಕೇಳ್ತಾ ಇದ್ರೆ ಅಬ್ಬಬ್ಬಾ.. ಒಂದು ಸಾಮಾನ್ಯ ಬೆಕ್ಕಿಗೂ ಇಷ್ಟೆಲ್ಲಾ ಕಾಳಜಿ ಮಾಡುತ್ತಾರಾ ಅಂತಾ ಆಶ್ಚರ್ಯವೆನಿಸುತ್ತದೆ.