ಅಹಮದಾಬಾದ್: ಬೇಸಿಗೆಯ ಆಗಮನ ಮತ್ತು ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಗುಜರಾತ್‍ನಲ್ಲಿ ನಿಂಬೆ ಹಣ್ಣಿನ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರಂಟಿ.
ಹೌದು, ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಿಂಬೆಹಣ್ಣಿನ ಬೆಲೆ ಪ್ರತಿ ಕೆ.ಜಿ.ಗೆ 200 ರೂ.ಗೆ ಏರಿದೆ. ಹಣದುಬ್ಬರದಿಂದ ಆಗುತ್ತಿರುವ ಬೆಲೆ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ಸಂಕಷ್ಟದಲ್ಲಿರುವಾಗಲೇ ತರಕಾರಿಗಳ ಬೆಲೆ ಏರಿಕೆಯಾಗಿದೆ.
ಕೇವಲ ನಿಂಬೆ ಮತ್ತು ತರಕಾರಿಗಳು ಮಾತ್ರವಲ್ಲ, ಹಾಲು ಮತ್ತು ಇಂಧನದಿಂದ ಇತರ ಅಗತ್ಯ ವಸ್ತುಗಳ ಬೆಲೆಗಳು ಕಳೆದ ಕೆಲವು ವಾರಗಳಿಂದ ವಿಪರೀತ ಹೆಚ್ಚಾಗಿದೆ. ನಿಂಬೆ ಹಣ್ಣಿನ ಬೆಲೆ ಕೆ.ಜಿ.ಗೆ 200 ರೂ. ಆಗಿದೆ. ಈ ಹಿಂದೆ ಪ್ರತಿ ಕೆ.ಜಿ.ಗೆ 50 ರಿಂದ 60 ರೂ. ಇತ್ತು.
ನಿಂಬೆ ಹಣ್ಣಿನ ಬೆಲೆ ಏಕೆ ಹೆಚ್ಚುತ್ತಿದೆ..?
ವರದಿಯ ಪ್ರಕಾರ, ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಪೂರೈಕೆಯ ಕೊರತೆ ಮತ್ತು ಸಿಟ್ರಸ್ ಹಣ್ಣಿನ ಬೇಡಿಕೆಯಲ್ಲಿನ ಏರಿಕೆಯಿಂದಾಗಿ ನಿಂಬೆಹಣ್ಣಿನ ಬೆಲೆ ಹೆಚ್ಚಾಗಿದೆ. ಈ ಹಿಂದೆ ಪ್ರತಿ ಕೆ.ಜಿ.ಗೆ 50 ರಿಂದ 60 ರೂ.ಗೆ ಮಾರಾಟವಾಗುತ್ತಿದ್ದ ನಿಂಬೆಹಣ್ಣು ಪ್ರಸ್ತುತ 200 ರೂ.ಗೆ ಮಾರಾಟವಾಗುತ್ತಿದೆ.
ಉಷ್ಣತೆಯು ಹೆಚ್ಚಾದಂತೆ, ಜನರು ತಮ್ಮ ಆಹಾರದಲ್ಲಿ ನಿಂಬೆಯನ್ನು ಸೇರಿಸಲು ಬಯಸುತ್ತಾರೆ. ಏಕೆಂದರೆ, ಅವುಗಳು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ನಿಂಬೆ ಹಣ್ಣಿನ ಹೆಚ್ಚಿದ ಬಳಕೆ ಮತ್ತು ಪೂರೈಕೆಯ ಕೊರತೆಯಿಂದಾಗಿ ಇದರ ಬೆಲೆ ಗಗನಕ್ಕೇರಿದೆ.
ಇನ್ನು ಹಠಾತ್ ಬೆಲೆ ಏರಿಕೆಯಿಂದ ಖರೀದಿದಾರರು ಕಡಿಮೆ ಪ್ರಮಾಣದಲ್ಲಿ ನಿಂಬೆ ಹಣ್ಣನ್ನು ಖರೀದಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ನಿಂಬೆ ಮತ್ತು ಇತರ ತರಕಾರಿಗಳ ಬೆಲೆ ಏರಿಕೆ ವ್ಯಾಪಾರಸ್ಥರ ಮೇಲೂ ಪರಿಣಾಮ ಬೀರಿದೆ. ಹೀಗಾಗಿ, ಬೆಲೆ ಏರಿಕೆಯು ವ್ಯಾಪಾರಿಗಳು ಮತ್ತು ಖರೀದಿದಾರರ ಮೇಲೆ ಪರಿಣಾಮ ಬೀರಿದೆ.
ಇತ್ತೀಚಿನ ವರದಿ ಪ್ರಕಾರ, ಮೆಣಸಿನಕಾಯಿ, ಶುಂಠಿ, ಬೀನ್ಸ್, ಬೆಳ್ಳುಳ್ಳಿ, ಹೂಕೋಸು, ಕೊತ್ತಂಬರಿ ಬೆಲೆ ಕಳೆದ ವಾರಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದೆ. ಜೀರಿಗೆ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ ಬೆಲೆ ಶೇ.40ರಿಂದ 60ರಷ್ಟು ಜಿಗಿತ ಕಂಡಿದೆ.
ಹಾಲಿನ ಬೆಲೆಯೂ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದೆ. ಕಳೆದ ತಿಂಗಳಷ್ಟೆ ಡೈರಿ ದೈತ್ಯ ಅಮೂಲ್, ತಾನು ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಹೆಚ್ಚಿಸುತ್ತಿರುವುದಾಗಿ ಘೋಷಿಸಿದೆ. ಇದು ಎಂಆರ್ಪಿಗಳಲ್ಲಿ ಶೇ.4ರಷ್ಟು ಏರಿಕೆಯಾಗಿದೆ. ಬಳಿಕ ಮದರ್ ಡೇರಿ ಕೂಡ ಹಾಲಿನ ದರವನ್ನು ಲೀಟರ್ ಗೆ 2 ರೂ. ಏರಿಸಿದೆ.