ಕಾಬೂಲ್: ಅಫ್ಘಾನಿಸ್ತಾನದ ಮಜರ್-ಎ-ಷರೀಫ್ ಮತ್ತು ಕುಂದುಜ್ ನಗರಗಳಲ್ಲಿ ಸಂಭವಿಸಿದ ಪ್ರತ್ಯೇಕ ಸ್ಫೋಟಗಳು ಕನಿಷ್ಠ 22 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಅನೇಕರು ಗಾಯಗೊಂಡಿದ್ದಾರೆ.
ಉತ್ತರ ಅಫ್ಘಾನಿಸ್ತಾನದ ಮಜಾರ್-ಎ-ಷರೀಫ್ ನಗರದ ಶಿಯಾ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಉತ್ತರ ಅಫ್ಘಾನಿಸ್ತಾನದ ಮತ್ತೊಂದು ನಗರವಾದ ಕುಂದುಜ್ ನಲ್ಲಿನ ಪ್ರತ್ಯೇಕ ಸ್ಫೋಟವು ಕನಿಷ್ಠ 11 ಕ್ಕೂ ಹೆಚ್ಚು ಸಾವು-ನೋವುಗಳಿಗೆ ಕಾರಣವಾಯಿತು ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪವಿತ್ರ ರಂಜಾನ್ ತಿಂಗಳಿನಲ್ಲಿ ಈ ಸ್ಫೋಟಗಳು ಸಂಭವಿಸಿವೆ ಮತ್ತು ಪಶ್ಚಿಮ ಕಾಬೂಲ್ ನ ಪ್ರಧಾನ ಶಿಯಾ ಹಜಾರಾ ಪ್ರದೇಶದಲ್ಲಿನ ಪ್ರೌಢಶಾಲೆಯಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ ಎರಡು ದಿನಗಳ ನಂತರ ಮತ್ತೆ ಸ್ಫೋಟ ಸಂಭವಿಸಿದೆ.
ಪ್ರಾಂತೀಯ ಆರೋಗ್ಯ ಪ್ರಾಧಿಕಾರದ ವಕ್ತಾರ ಜಿಯಾ ಝೆಂಡಾನಿ, ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 32 ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಶಿಯಾ ಸಮುದಾಯವು ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಸುನ್ನಿ ಉಗ್ರಗಾಮಿ ಗುಂಪುಗಳಿಂದ ಆಗಾಗ್ಗೆ ಗುರಿಯಾಗುತ್ತಿದೆ.