ಅಫ್ಘಾನಿಸ್ತಾನದಲ್ಲಿ ಅಂಧಾ ದರ್ಬಾರ್ ನಡೆಸ್ತಾ ಇರೋ ತಾಲಿಬಾನ್ ಅಲ್ಲಿನ ಮಹಿಳೆಯರಿಗೆ ಇನ್ನಿಲ್ಲದ ಕಿರುಕುಳ ನೀಡ್ತಾ ಇದೆ. ಒಂದಾದ ಮೇಲೊಂದರಂತೆ ನಿರ್ಬಂಧಗಳನ್ನು ಹೇರುತ್ತಲೇ ಇದೆ. ಇದೀಗ ಕಝಾಕಿಸ್ತಾನ್ ಮತ್ತು ಕತಾರ್ ಹೊರತುಪಡಿಸಿ ಇತರ ದೇಶಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿನಿಯರು, ಯುವತಿಯರು ಮತ್ತು ಮಹಿಳೆಯರು ದೇಶ ತೊರೆಯದಂತೆ ತಾಲಿಬಾನ್ ಫರ್ಮಾನು ಹೊರಡಿಸಿದೆ.
ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಕಾಬೂಲ್ ತೊರೆಯಲು ಯೋಜಿಸುತ್ತಿದ್ದರು. ಆದರೆ ತಾಲಿಬಾನ್ ವಿದ್ಯಾರ್ಥಿಗಳಿಗೆ ಮಾತ್ರ ಅಫ್ಘಾನಿಸ್ತಾನವನ್ನು ತೊರೆಯಲು ಅವಕಾಶ ಮಾಡಿಕೊಡದೆ ವಿದ್ಯಾರ್ಥಿನಿಯರು ದೇಶ ತೊರೆಯುವಂತಿಲ್ಲ ಅಂತಾ ಹೇಳಿದೆ.
2021ರ ಸಪ್ಟೆಂಬರ್‌ನಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಅಫ್ಘಾನ್‌ನ ಮಹಿಳೆಯರು ಉದ್ಯೋಗ ಮಾಡದಂತೆ ತಾಲಿಬಾನ್ ನಿಷೇಧ ಹೇರಿದೆ. ಆರನೇ ತರಗತಿಯ ನಂತರ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದನ್ನು ಸಹ ನಿರ್ಬಂಧಿಸಲಾಗಿದೆ. ಅಷ್ಟೇ ಅಲ್ಲ ಎಲ್ಲಾ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಮುಖವನ್ನು ಮುಚ್ಚಿಕೊಂಡೇ ಇರಬೇಕೆಂದು ಸಹ ತಾಲಿಬಾನ್ ಆದೇಶಿಸಿದೆ.
ಮಹಿಳೆಯರು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ. ಪುರುಷರೊಂದಿಗೆ ಉದ್ಯಾನವನಗಳಿಗೆ ಹೋಗಲು ಸಹ ಅನುಮತಿಯಿಲ್ಲ. ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವಂತಿಲ್ಲ ಎಂದು ತಾಲಿಬಾನ್ ಆದೇಶಿಸಿತ್ತು. ಅವರೊಂದಿಗೆ ಕುಟುಂಬದ ಮತ್ತೋರ್ವ ಪುರುಷ ಸದಸ್ಯ ಹೋಗಲೇಬೇಕೆಂದು ಸೂಚಿಸಿತ್ತು.
ಮಹಿಳೆಯರು ಇಲ್ಲಿ ಸ್ಮಾರ್ಟ್ ಫೋನ್ ಬಳಸುವಂತಿಲ್ಲ. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದ್ರೆ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ಆ ದೇಶದಲ್ಲಿ ಅಸಮಾನತೆಯನ್ನು ಹೋಗಲಾಡಿಸುವುದಾಗಿ ಭರವಸೆ ನೀಡಿತ್ತು. ಅದೆಲ್ಲವೂ ಈಗ ಸುಳ್ಳಾಗಿದೆ.