ಅಪ್ರಾಪ್ತ ವಯಸ್ಸಿನ ಬಾಲಕಿ ಲೈಂಗಿಕ ಸಂಪರ್ಕಕ್ಕೆ ಸಮ್ಮತಿಸಿದ್ದಳೆಂಬ ಕಾರಣಕ್ಕೆ ಕಾನೂನಿನ ಅಡಿಯಲ್ಲಿ ಅದು ಒಪ್ಪಿತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್, ಅತ್ಯಾಚಾರ ಆರೋಪದಲ್ಲಿ ಜೈಲು ಪಾಲಾಗಿರುವ ಆರೋಪಿಗೆ ಜಾಮೀನು ನಿರಾಕರಿಸಿದೆ.
ಪ್ರಕರಣದ ವಿವರ: 2019ರಲ್ಲಿ ನವದೆಹಲಿಯ 16 ವರ್ಷದ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಒಂದೂವರೆ ತಿಂಗಳ ಬಳಿಕ 23 ವರ್ಷದ ವಿವಾಹಿತ ಯುವಕನೊಂದಿಗೆ ಆಕೆ ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದಳು.
ಇಬ್ಬರನ್ನು ಕರೆದುಕೊಂಡು ಬಂದ ವೇಳೆ ಬಾಲಕಿ ತಾನು ಸಮ್ಮತಿಯ ಮೇರೆಗೆ ಆತನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದು, ಮುಂದೆಯೂ ಕೂಡ ಆತನ ಜೊತೆಯಲ್ಲಿಯೇ ಇರುವುದಾಗಿ ಹೇಳಿಕೆ ನೀಡಿದ್ದಳು. ಆದರೆ ಕಾನೂನು ಪ್ರಕಾರ ಅಪ್ರಾಪ್ತೆಗೆ 18 ವರ್ಷ ತುಂಬಿಲ್ಲವಾದ ಕಾರಣ ವಿವಾಹಿತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.
ಆದರೆ ಅಪ್ರಾಪ್ತೆಯ ಸಮ್ಮತಿ ಮೇರೆಗೆ ತಾನು ಲೈಂಗಿಕ ಸಂಪರ್ಕ ಹೊಂದಿದ್ದಾಗಿ ತಿಳಿಸಿ ಆತ ಜಾಮೀನು ಕೋರಿದ್ದ. ಅಲ್ಲದೆ ಆಕೆ ಪ್ರಾಪ್ತ ವಯಸ್ಕಳೆಂಬಂತೆ ಬಿಂಬಿಸಲು ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕ 2002ರ ಬದಲಾಗಿ ಮಾರ್ಚ್ 5, 2000 ಎಂದು ತಿದ್ದುಪಡಿ ಮಾಡಲಾಗಿತ್ತು. ಇದನ್ನೆಲ್ಲಾ ಪರಿಗಣಿಸಿರುವ ನ್ಯಾಯಾಲಯ, ಆಕೆ ಸಮ್ಮತಿ ನೀಡಿದ್ದರೂ ಸಹ ಇದು ದೇಶದ ಕಾನೂನಿನಡಿ ಒಪ್ಪಿತವಲ್ಲ ಎಂದು ಹೇಳಿ ಆರೋಪಿಗೆ ಜಾಮೀನು ನಿರಾಕರಿಸಿದೆ.