ಬಹಳಷ್ಟು ಪೋಷಕರು ತಮ್ಮ ಮಕ್ಕಳಿಗೆ ವಾಹನ ಚಾಲನಾ ಪರವಾನಗಿ ಇಲ್ಲದಿದ್ದರೂ ಸಹ ಅವರಿಗೆ ವಾಹನ ನೀಡುತ್ತಾರೆ. ಅಲ್ಲದೆ ವಾಹನ ಚಾಲನಾ ಪರವಾನಿಗೆ ಪತ್ರ ಪಡೆಯಲು ಪ್ರಾಪ್ತ ವಯಸ್ಕರಾಗಬೇಕಿದ್ದು, ಆದರೆ ಅಪ್ರಾಪ್ತರಿಗೂ ವಾಹನ ನೀಡುವ ಹಲವು ಉದಾಹರಣೆಗಳು ಇವೆ.
ಈ ರೀತಿ ಅಪ್ರಾಪ್ತರಿಗೆ ವಾಹನ ನೀಡುವ ಮೂಲಕ ಮತ್ತೊಬ್ಬರಿಗೆ ಕಂಟಕವಾಗುವುದರ ಜೊತೆಗೆ ಸ್ವತಃ ತಾವೂ ಸಹ ಸಂಕಷ್ಟಕ್ಕೆ ಸಿಲುಕುತ್ತಾರೆ. ಅಂತಹ ಪ್ರಕರಣ ಒಂದರ ವರದಿ ಇಲ್ಲಿದೆ. ಈ ಸುದ್ದಿ ಓದಿದರೆ ನೀವು ಅಪ್ರಾಪ್ತರಿಗೆ ಖಂಡಿತವಾಗಿಯೂ ವಾಹನ ಚಲಾಯಿಸಲು ಅವಕಾಶ ನೀಡುವುದಿಲ್ಲ.
ಹೌದು, ಹೀಗೆ ತಮ್ಮ ಅಪ್ರಾಪ್ತ ಮಗನಿಗೆ ವಾಹನ ಚಲಾಯಿಸಲು ನೀಡಿದ ತಂದೆಯೊಬ್ಬರಿಗೆ ನ್ಯಾಯಾಲಯ ಬರೋಬ್ಬರಿ 20,000 ರೂ. ದಂಡ ವಿಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರು ಅಬ್ದುಲ್ ರಹಿಮಾನ್ ಎಂಬವರಿಗೆ ಈ ದಂಡ ವಿಧಿಸಿದ್ದಾರೆ.
2020ರಲ್ಲಿ ಅಬ್ದುಲ್ ರಹಿಮಾನ್ ತಮ್ಮ ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದು, ಅಪಘಾತವಾದ ಕಾರಣ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ನ್ಯಾಯಾಧೀಶರಾದ ಯೋಗೇಂದ್ರ ಶೆಟ್ಟಿ ಅವರು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಎಪಿಪಿ ಕವಿತಾ ಅವರು ವಾದಿಸಿದ್ದರು.