ಕುಡಿದ ಆಮಲಿನಲ್ಲಿ ತನ್ನ ತಾಯಿಯನ್ನು ಕೊಂದ ಹೆತ್ತವನಿಗೆ ಆರು ವರ್ಷದ ಮಗಳೇ ಶಿಕ್ಷೆ ಕೊಡಿಸಿದ್ದಾಳೆ. ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಆಕೆ, ನ್ಯಾಯಾಧೀಶರ ಎದುರು ನುಡಿದ ಸಾಕ್ಷ್ಯದ ಪರಿಣಾಮ ಆಕೆಯ ಅಪ್ಪ ಜೈಲು ಪಾಲಾಗಿದ್ದಾನೆ.
ಪ್ರಕರಣದ ವಿವರ: 2019ರ ಡಿಸೆಂಬರ್ 5ರಂದು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂಕಮ್ಮನ ಹಾಳದಲ್ಲಿ ಮಹಿಳೆಯೊಬ್ಬರ ಕೊಲೆ ನಡೆದಿತ್ತು. ಮೊದಲೇ ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬ ಮತ್ತಷ್ಟು ಕುಡಿಯಲು ಪತ್ನಿ ಬಳಿ ಹಣಕ್ಕಾಗಿ ಪೀಡಿಸಿದ್ದು ಆಕೆ ನಿರಾಕರಿಸಿದಾಗ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ.
ಈ ಪ್ರಕರಣದ ವಿಚಾರಣೆ ಕೈಗೊಂಡಿದ್ದ ಪೊಲೀಸರು ಮಾರಕ್ಕನ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ಹನುಮೇಶನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದರಲ್ಲಿ ಮೃತ ಮಹಿಳೆಯ ಆರು ವರ್ಷದ ಪುತ್ರಿ ಸೇರಿದಂತೆ 19 ಮಂದಿ ಸಾಕ್ಷಿಗಳಾಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ ಈಗ ತೀರ್ಪು ಪ್ರಕಟಿಸಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಲಕ್ಷ್ಮೀದೇವಿ ಪಾಟೀಲ್ ವಾದ ಮಂಡಿಸಿದ್ದರು.