ಯುವಕನೊಬ್ಬ ತನ್ನ ಪೋಷಕರಿಂದ ಹಣ ಕೇಳುವ ಸಲುವಾಗಿ ತನ್ನದೇ ಅಪಹರಣ ಕಥೆ ಕಟ್ಟಿದ್ದು, 5 ಲಕ್ಷ ರೂಪಾಯಿ ನೀಡಿ ನನ್ನನ್ನು ಅಪಹರಣಕಾರರಿಂದ ಬಿಡಿಸಿಕೊಳ್ಳಿ. ಇಲ್ಲದಿದ್ದರೆ ಇವರು ನನ್ನನ್ನು ಕೊಂದುಬಿಡುತ್ತಾರೆ ಎಂದು ಕಥೆ ಕಟ್ಟಿದ್ದ. ಬಳಿಕ ಗೋವಾದಲ್ಲಿ ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದು, ಮೊಬೈಲ್ ಲೊಕೇಶನ್ ಮೂಲಕ ಆತನನ್ನು ಪತ್ತೆ ಹಚ್ಚಿದ ಪೊಲೀಸರು ಇದೀಗ ಬಂಧನಕ್ಕೊಳಪಡಿಸಿದ್ದಾರೆ.
ಇಂಥದೊಂದು ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದ್ದು, ಅಂಬಾಗಿಲು ನಿವಾಸಿ ವರುಣ್ ಎಂಬಾತ ತನ್ನ ಪೋಷಕರಿಗೆ ಅಪಹರಣವಾಗಿರುವುದಾಗಿ ಫೋನ್ ಮಾಡಿದ್ದ. ಜೊತೆಗೆ 5 ಲಕ್ಷ ರೂಪಾಯಿ ನೀಡಿ ನನ್ನನ್ನು ಬಿಡಿಸಿಕೊಂಡು ಹೋಗುವಂತೆ ಅಂಗಲಾಚಿದ್ದ. ಇದನ್ನು ನಂಬಿದ ಪೋಷಕರು ಗಾಬರಿಗೊಂಡು ಉಡುಪಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಫೋನ್ ಲೊಕೇಶನ್ ನೋಡಿದಾಗ ಗೋವಾದಲ್ಲಿ ಈ ಫೋನ್ ಆಕ್ಟಿವ್ ಆಗಿರುವುದು ತಿಳಿದು ಬಂದಿದೆ. ಕೂಡಲೇ ಪೊಲೀಸರ ತಂಡ ಗೋವಾಗೆ ತೆರಳಿದ ವೇಳೆ ಅವರಿಗೆ ಅಚ್ಚರಿ ಕಾದಿತ್ತು. ಅಪಹರಣಕ್ಕೊಳಗಾಗಿರುವುದಾಗಿ ಹೇಳಲಾದ ವರುಣ್ ಅಲ್ಲಿ ತನ್ನ ಸ್ನೇಹಿತರೊಂದಿಗೆ ಕ್ಯಾಸಿನೋ ದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ. ಇದೀಗ ಆತನನ್ನು ಹೆಡೆಮುರಿ ಕಟ್ಟಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.