ಬಹುತೇಕರಿಗೆ ಕಣ್ಣು, ಮೂಗು, ಕಿವಿ ಹೀಗೆ ತಮ್ಮ ದೇಹದ ಅಂಗಗಳನ್ನು ಆಗಾಗ ಸ್ಪರ್ಶಿಸಿಕೊಳ್ಳುವುದು ಅಥವಾ ತುರಿಸಿಕೊಳ್ಳುವ ಅಭ್ಯಾಸವಿರುತ್ತದೆ. ಆದ್ರೆ ನಮ್ಮ ದೇಹದ ಅನೇಕ ಅಂಗಗಳು ಸೂಕ್ಷ್ಮವಾಗಿರುತ್ತವೆ. ಅದನ್ನು ಸ್ಪರ್ಶಿಸುವುದ್ರಿಂದ ಅಪಾಯವನ್ನು ಆಹ್ವಾನಿಸಿದಂತೆ. ಇದನ್ನು ಸ್ಪರ್ಶಿಸುವುದು ಅಥವಾ ಉಜ್ಜುವುದ್ರಿಂದ ಸೋಂಕು ತಗಲುವ ಸಾಧ್ಯತೆಯಿರುತ್ತದೆ.
ಅನೇಕರು ತಮ್ಮ ಕಣ್ಣುಗಳನ್ನು ಆಗಾಗ ಮುಟ್ಟಿಕೊಳ್ತಿರುತ್ತಾರೆ. ಕಣ್ಣುಗಳನ್ನು ಪದೇ ಪದೇ ಉಜ್ಜಿಕೊಳ್ಳುವ ಅಭ್ಯಾಸ ಅವರಿಗಿರುತ್ತದೆ. ಕಣ್ಣು ಬಹಳ ಸೂಕ್ಷ್ಮ ಎಂಬುದು ಎಲ್ಲರಿಗೂ ಗೊತ್ತು. ಕಣ್ಣಿಗೆ ಬಹುಬೇಗ ಸೋಂಕು ತಗಲುತ್ತದೆ. ನಮ್ಮ ಕೈ ಹಾಗೂ ಉಗುರಿನಲ್ಲಿರುವ ಕೀಟಾಣು ಕಣ್ಣು ಸೇರುತ್ತದೆ.
ಮಲ ವಿಸರ್ಜನೆ ಜಾಗದಲ್ಲಿ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಿರುತ್ತದೆ. ದೇಹದ ಇತರ ಭಾಗಗಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಅಲ್ಲಿಯ ಸ್ಪರ್ಶ ಅನಾರೋಗ್ಯಕ್ಕೆ ಆಹ್ವಾನ ಮಾಡಿದಂತೆ.
ಅನೇಕರು ತಮ್ಮ ಬೆರಳುಗಳಿಂದ ಮೂಗನ್ನು ಸ್ವಚ್ಛಗೊಳಿಸಿಕೊಳ್ತಾರೆ. ಆದ್ರೆ ಅವ್ರಿಗೆ ತಾವು ಮೂಗು ಸ್ವಚ್ಛಗೊಳಿಸುತ್ತಿಲ್ಲ, ಮತ್ತಷ್ಟು ಕೊಳಕು ಮಾಡ್ತಿದ್ದೇವೆ ಎಂಬುದು ಗೊತ್ತಿರುವುದಿಲ್ಲ. ಮೂಗು ಸ್ವಚ್ಛ ಮಾಡುವ ವೇಳೆ ನಿಮ್ಮ ಬೆರಳುಗಳಲ್ಲಿರುವ ಬ್ಯಾಕ್ಟೀರಿಯಾ ಮೂಗು ಸೇರುತ್ತದೆ.
ಉಗುರನ್ನು ಬಾಯಿಯಿಂದ ಕಚ್ಚುವ ಅಭ್ಯಾಸ ಅನೇಕರಿಗಿರುತ್ತದೆ. ಇದು ಕೂಡ ಒಳ್ಳೆಯದಲ್ಲ. ಉಗುರಿನಲ್ಲಿರುವ ಕೀಟಾಣುಗಳು ಸುಲಭವಾಗಿ ಹೊಟ್ಟೆ ಸೇರುತ್ತವೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.