ಫ್ರಿಜ್ ಮಹಿಳೆಯರಿಗೆ ಅಚ್ಚುಮೆಚ್ಚು. ಆಹಾರ ಪದಾರ್ಥಗಳನ್ನು ರಕ್ಷಿಸುವ ಕಾರಣ ನೀಡಿ ಎಲ್ಲ ಆಹಾರಗಳನ್ನು ಫ್ರಿಜ್ ನಲ್ಲಿಡುತ್ತಾರೆ. ಆದ್ರೆ ಕೆಲವೊಂದು ಆಹಾರ ಫ್ರಿಜ್ ನಲ್ಲಿಟ್ಟರೆ ಹಾಳಾಗುತ್ತೆ. ಈ ವಿಷಯ ಕೆಲವರಿಗೆ ಗೊತ್ತಿದ್ರೆ ಮತ್ತೆ ಕೆಲವರಿಗೆ ತಿಳಿದೇ ಇಲ್ಲ. ಹಾಗಾಗಿ ಯಾವ ಆಹಾರ ಪದಾರ್ಥಗಳನ್ನು ಫ್ರಿಜ್ ನಲ್ಲಿಡಬಾರದು ಅಂತಾ ನಾವು ಹೇಳ್ತೇವೆ ಓದಿ.
ಕಾಫಿಯನ್ನು ಫ್ರಿಜ್ ನಲ್ಲಿಡುವುದರಿಂದ ಅದು ತನ್ನ ಪರಿಮಳವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಫ್ರಿಜ್ ನಿಂದ ಹೊರಗೆ ಏರ್ ಟೈಟ್ ಇರುವ ಜಾರಿನಲ್ಲಿಡುವುದು ಒಳ್ಳೆಯದು.
ಎಣ್ಣೆಯನ್ನು ಫ್ರಿಜ್ ನಲ್ಲಿ ಇಡಲೇಬಾರದು. ಫ್ರಿಜ್ ನಲ್ಲಿ ಎಣ್ಣೆಯಿಟ್ಟರೆ ಅದು ದಪ್ಪಗಾಗಿ ಬಿಡುತ್ತದೆ. ಕೆಲ ಸಮಯದ ನಂತ್ರ ಬೆಣ್ಣೆಯಂತಾಗಿಬಿಡುತ್ತದೆ. ತೆಂಗಿನ ಎಣ್ಣೆ, ಆಲಿವ್ ಆಯಿಲನ್ನು ಹೊರಗೆ ಇಡುವುದು ಒಳ್ಳೆಯದು. ಒಂದು ವೇಳೆ ಇವುಗಳನ್ನು ಫ್ರಿಜ್ ನಲ್ಲಿಟ್ಟರೆ ಹೊರೆಗೆ ತೆಗೆದ ತಕ್ಷಣ ಬಳಸಲು ಬರುವುದಿಲ್ಲ.
ಈರುಳ್ಳಿಯನ್ನು ಅಪ್ಪಿ ತಪ್ಪಿಯೂ ಫ್ರಿಜ್ ನಲ್ಲಿಡಬೇಡಿ. ಫ್ರಿಜ್ ನಲ್ಲಿಟ್ಟ ಈರುಳ್ಳಿ ಬಹು ಬೇಗ ಕೊಳೆತು ಹೋಗುತ್ತದೆ. ಜೊತೆಗೆ ಅದರಿಂದ ಬರುವ ಕೆಟ್ಟ ವಾಸನೆ, ಫ್ರಿಜ್ ನಲ್ಲಿರುವ ಇತರ ಆಹಾರದ ಮೇಲೆಯೂ ಪರಿಣಾಮ ಬೀರುತ್ತದೆ.
ಆಲೂಗಡ್ಡೆಯನ್ನು ಕೂಡ ಫ್ರಿಜ್ ನಲ್ಲಿಡಬಾರದು. ಹಾಗೆ ಟೋಮೇಟೋವನ್ನು ಕೂಡ ಫ್ರಿಜ್ ನಲ್ಲಿಡಬೇಡಿ. ಟೋಮೋಟೋ ಸುವಾಸನೆ ಕಳೆದುಕೊಳ್ಳುತ್ತದೆ.
ಜೇನುತುಪ್ಪವನ್ನು ಫ್ರಿಜ್ ನಲ್ಲಿಡುವುದು ಒಳ್ಳೆಯದಲ್ಲ. ಹೊರಗೆ ಬಿಗಿಯಾದ ಬಾಟಲಿಯಲ್ಲಿ ಜೇನು ತುಪ್ಪವನ್ನು ಹಾಕಿಟ್ಟರೆ ಅದು ವರ್ಷಾನುಗಟ್ಟಲೆ ಹಾಳಾಗುವುದಿಲ್ಲ. ಆದ್ರೆ ಫ್ರಿಜ್ ನಲ್ಲಿಟ್ಟರೆ ಅದರಲ್ಲಿರುವ ಸಕ್ಕರೆ ಅಂಶ ಬೇರ್ಪಡಲು ಶುರುವಾಗುತ್ತದೆ.
ಇನ್ನು ಬ್ರೆಡನ್ನು ಕೂಡ ಫ್ರಿಜ್ ನಲ್ಲಿಡಬಾರದು. ಬೆಳ್ಳುಳ್ಳಿ, ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿಡುವುದರಿಂದ ಅದು ಬೇಗ ಕಾಳಾಗುತ್ತದೆ.