ಕೊರೊನಾದಿಂದಾಗಿ ಕೆಲಸ ಕಳೆದುಕೊಂಡವರು ಅದೆಷ್ಟೋ ಮಂದಿ. ಕೊರೊನಾದ ಭೀತಿ ಮುಗಿದರೂ ಕೆಲಸಕ್ಕಾಗಿ ಹಲವರು ಪರದಾಡುತ್ತಲೇ ಇದ್ದಾರೆ. ಇಂಥ ಸಮಯದಲ್ಲಿ ಸಿಕ್ಕ ಕೆಲಸಕ್ಕೆ ಸಂತೃಪ್ತಿಪಟ್ಟುಕೊಳ್ಳುತ್ತಿರುವ ಜೀವಗಳು ಹಲವು. ಅಂಥ ಸಂದರ್ಭದಲ್ಲಿ ಮನೆಯವರ ಸಂತೋಷವೂ ವರ್ಣಿಸಲು ಅಸಾಧ್ಯ.
ಅಂಥದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಹೆಣ್ಣುಮಕ್ಕಳಿಗೆ ಎಷ್ಟೆಂದರೂ ಅಪ್ಪನೆಂದರೆ ಸ್ವಲ್ಪ ಹೆಚ್ಚಿನ ರೀತಿಯ ಪ್ರೀತಿ ಎನ್ನುವ ಮಾತಿದೆ. ಈ ವಿಡಿಯೋದಲ್ಲಿಯೂ ಅಪ್ಪ-ಮಗಳ ಭಾವನಾತ್ಮಕ ಸಂಬಂಧವನ್ನು ಕಾಣಬಹುದಾಗಿದೆ.
ಈ ವಿಡಿಯೋದಲ್ಲಿ ಅಪ್ಪ ಮಗಳಿಗೆ ಸರ್ಪ್ರೈಸ್ ಕೊಡಲು ಕಾದಿರುವುದನ್ನು ಕಾಣಬಹುದು. ಮಗಳು ಅದೇನು ಎಂದು ನೋಡಲು ಕಣ್ಣುಮುಚ್ಚಿ ನಿಲ್ಲುತ್ತಾಳೆ. ಆಗ ಅಪ್ಪ ತನ್ನ ಹೊಸ ಕೆಲಸದ ಸಮವಸ್ತ್ರವನ್ನು ಎದೆಗೆ ಹಿಡಿದುಕೊಂಡು ಮಗಳಿಗೆ ತೋರಿಸುತ್ತಾನೆ. ಸ್ವಿಗ್ಗಿ ಕಂಪೆನಿಯಲ್ಲಿ ತನಗೆ ಹೊಸ ಕೆಲಸ ಸಿಕ್ಕಿತೆಂದು ಮಗಳಿಗೆ ಹೇಳಿದಾಗ ಆಕೆಗೆ ಆಗುವ ಆನಂದಕ್ಕೆ ಪಾರವೇ ಇಲ್ಲ. ಅಪ್ಪನನ್ನು ತಬ್ಬಿ ಮುದ್ದಾಡುತ್ತಾಳೆ.
ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. 8 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. 51 ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋ ಇಷ್ಟಪಟ್ಟಿದ್ದಾರೆ.
‘ಇಂಥ ದೇವತೆಯಂಥ ಮಗಳನ್ನು ಪಡೆದ ನೀವು ಅದೃಷ್ಟವಂತರು’ ಎಂದಿದ್ದಾರೆ ಒಬ್ಬರು. ‘ನಿಮ್ಮ ಕುಟುಂಬ ಸಂತೋಷವಾಗಿರಲಿ ಎಂದು ಬಯಸುತ್ತೇನೆ’ ಎಂದು ಮತ್ತೊಬ್ಬರು ಹಾರೈಸಿದ್ದಾರೆ. ‘ಇದು ತುಂಬಾ ಮುದ್ದಾದ ವಿಡಿಯೋ. ನಿಮಗೆ ಒಳ್ಳೆಯದಾಗಲಿ ಅಣ್ಣಾ’ ಎಂದಿದ್ದಾರೆ ಮಗದೊಬ್ಬರು. ‘ದೇವರ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ’ ಎಂದಿದ್ದಾರೆ ಇನ್ನೊಬ್ಬರು.
https://youtu.be/5pUwsIghnok