
ಕಝಾಕಿಸ್ತಾನ್‌ನಲ್ಲಿ ಈ ಘಟನೆ ನಡೆದಿದ್ದು, ಸಬಿತ್ ಶೊಂಟಕ್‌ಬೇವ್ ಎಂಬ ವ್ಯಕ್ತಿ ಅಪಾರ್ಟ್ಮೆಂಟ್ ನ ಕಿಟಕಿಯಿಂದ ನೇತಾಡುತ್ತಿದ್ದ ಪುಟ್ಟ ಮಗುವನ್ನು ನೋಡಿದ್ದಾರೆ. ಕೂಡಲೇ ತಡಮಾಡದ ಅವರು ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ್ದಾರೆ. ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಸ್ ನಲ್ಲಿ ಹಂಚಿಕೊಂಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಗುಡ್ ನ್ಯೂಸ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಮೂರು ವರ್ಷದ ಬಾಲಕಿಯನ್ನು ರಕ್ಷಿಸಲು ಸಬಿತ್ ಸುಮಾರು 80 ಅಡಿಗಳಷ್ಟು ಏರುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಸಬಿತ್ ಶೊಂಟಕ್ಬೇವ್ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಕಟ್ಟಡದ 8ನೇ ಮಹಡಿಯಲ್ಲಿ ಕಿಟಕಿಯಿಂದ ತೂಗಾಡುತ್ತಿರುವ ಮಗುವನ್ನು ಕಂಡಿದ್ದಾರೆ. ತಕ್ಷಣ ಅಪಾರ್ಟ್ಮೆಂಟ್ ನತ್ತ ಸಬಿತ್ ಓಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಬಿತ್, ತನಗೆ ಯಾವುದೇ ಸುರಕ್ಷತಾ ಸಾಧನ ಇರಲಿಲ್ಲ. ಸ್ನೇಹಿತ ತನ್ನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡ. ಬಳಿಕ ತಾನು ಮೇಲಕ್ಕೆ ಏರುತ್ತಾ ಹೋದೆ. ಆ ಕ್ಷಣದಲ್ಲಿ ತಾನು ಯಾವುದರ ಬಗ್ಗೆಯೂ ಯೋಚಿಸದೆ ಮಗುವಿಗೆ ಸಹಾಯ ಮಾಡುವುದನ್ನು ಮಾತ್ರ ಬಯಸಿದ್ದೆ ಎಂದು ಹೇಳಿದ್ದಾರೆ. ಸಬಿತ್ ಉತ್ತಮ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.