ಭಿಕ್ಷೆ ಬೇಡುವುದಕ್ಕಾಗಿ ಮಕ್ಕಳನ್ನು ಅಪಹರಿಸಿ, ಅದಕ್ಕೆ ಒಪ್ಪದ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದ ಆರೋಪದಲ್ಲಿ ಮರಣದಂಡನೆಗೆ ಒಳಗಾಗಿದ್ದ ಸಹೋದರಿಯರ ಶಿಕ್ಷೆಯನ್ನು, ಬಾಂಬೆ ಹೈಕೋರ್ಟ್ ಜೀವಾವಧಿಯಾಗಿ ಪರಿವರ್ತಿಸಿದೆ.
ತಾಯಿ ಅಂಜನಾ ಎಂಬುವವರೊಂದಿಗೆ ಸೇರಿ ಸಹೋದರಿಯರಾದ ಸೀಮಾ ಗವಿತ್ ಹಾಗೂ ರೇಣುಕಾ ಶಿಂಧೆ ಎಂಬುವವರು 13 ಮಕ್ಕಳನ್ನು ಅಪಹರಿಸಿದ್ದರು. ಭಿಕ್ಷೆಗೆ ನಿರಾಕರಿಸಿದ್ದ ಕೆಲವು ಮಕ್ಕಳನ್ನು ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ 2004ರಲ್ಲಿ ಹಾಗೂ 2006ರಲ್ಲಿ ಸುಪ್ರೀಂ ಕೋರ್ಟ್ ಮರಣ ದಂಡನೆ ಶಿಕ್ಷೆ ವಿಧಿಸಿದ್ದವು.
ಈ ಘಟನೆಯು 1990 ಹಾಗೂ 96ರಲ್ಲಿ ನಡೆದಿದ್ದವು. ಈ ಕುರಿತು 2001ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಶಿಕ್ಷೆಯನ್ನು ಸದ್ಯ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕೂಡ 2013ರಲ್ಲಿ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದರು. 2014ರಲ್ಲಿ ರಾಷ್ಟ್ರಪತಿಗಳು ಕೂಡ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದರು.
2008ರಲ್ಲಿ ಇಬ್ಬರು ಸಹೋದರಿಯರು ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದು, 2012-13ರಲ್ಲಿ ಇದನ್ನು ತಿರಸ್ಕರಿಸಲಾಗಿತ್ತು. ಇದರ ನಂತರ, ಅಪರಾಧಿಗಳು ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದರು, ಅದನ್ನು 2014ರಲ್ಲಿ ತಿರಸ್ಕರಿಸಲಾಯಿತು.
ಈ ಸಹೋದರಿಯರು ಆ ನಂತರ ಕ್ಷಮಾದಾನ ಅರ್ಜಿ ನಿರ್ಧರಿಸಲು ವಿಳಂಬವಾಗಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ, ಆರ್ಟಿಕಲ್ 226ರ ಅಡಿಯಲ್ಲಿ ಬಾಂಬೆ ಹೈಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸುವಂತೆ ಮನವಿ ಮಾಡಿದ್ದರು.