ಕೆಂಟುಕಿ: ಸಾಮಾಜಿಕ ಜಾಲತಾಣವನ್ನು ಕೆಲವರು ದುರ್ಬಳಕೆಗೆ ಉಪಯೋಗಿಸಿದವರೂ ಇದ್ದಾರೆ. ಆದರೆ, ಇದರಿಂದ ಅನೇಕ ಪ್ರಯೋಜನಗಳೂ ಇವೆ ಎಂಬುದು ಇದೀಗ ಸಾಬೀತಾಗಿದೆ.
ಮಾಜಿ ಗೆಳೆಯನಿಂದ ಅಪಹರಣಕ್ಕೊಳಗಾದ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿನ ಡಿಸ್ಟ್ರೆಸ್ ಸಂಕೇತವನ್ನು ಪ್ರದರ್ಶಿಸಿದ್ದರಿಂದ ರಕ್ಷಿಸಲ್ಪಟ್ಟ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಮಹಿಳೆಯ ಮಾಜಿ ಗೆಳೆಯ ಜೊನಾಥನ್ ಸ್ಮಿತ್(31) ಮನೆಗೆ ಆಗಮಿಸಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಪ್ರಯಾಣದ ವೇಳೆ ಅವರು ಪರಸ್ಪರ ವಾಗ್ವಾದ ಶುರು ಮಾಡಿದ್ದಾರೆ. ನಂತರ ಸ್ಮಿತ್ ಸ್ಕ್ರೂ ಡ್ರೈವರ್ ಹಿಡಿದು ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಸ್ಮಿತ್ ತನ್ನ ವಾಹನವನ್ನು ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದಾನೆ. ಈ ವೇಳೆ ಮಹಿಳೆ ಟಿಕ್‌ಟಾಕ್‌ನಂತೆ ತನ್ನ ಅಂಗೈಯನ್ನು ಮುಂದಕ್ಕೆ ಇಟ್ಟು ಸನ್ನೆ ಮಾಡಿದ್ದಾಳೆ.
ಪೆಟ್ರೋಲ್ ಬಂಕ್‍ನ ಕ್ಯಾಷಿಯರ್ ಈ ಸನ್ನೆಯನ್ನು ಅರ್ಥ ಮಾಡಿಕೊಂಡಿದ್ದು, ಕೂಡಲೇ ತುರ್ತು ಸಹಾಯವಾಣಿ 911 ಗೆ ಕರೆ ಮಾಡಿದ್ದಾರೆ. ಬಂಕ್ ನಿಂದ ತೆರಳಿದ ಸ್ಮಿತ್ ವಾಹನವನ್ನು, ಪೊಲೀಸರು ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ.