ಮುಂಬೈ: 200 ರೂ. ಲಂಚ ಪಡೆದ ಆರೋಪದ ಮೇಲೆ ಶಿಕ್ಷೆಗೊಳಗಾಗಿದ್ದ ಪೊಲೀಸ್ ಪೇದೆಯೊಬ್ಬರಿಗೆ ಬರೋಬ್ಬರಿ 28 ವರ್ಷಗಳ ಬಳಿಕ ನ್ಯಾಯ ಸಿಕ್ಕಿದೆ. ಪೊಲೀಸ್ ಪೇದೆಯನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ದುರಾದೃಷ್ಟವೆಂದರೆ ಪೇದೆ ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಆದರೆ ಅವರ ಪತ್ನಿ ಹಾಗೂ ಪುತ್ರಿ ಪ್ರಕರಣದ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು.
ಮುಖ್ಯಪೇದೆಯೊಬ್ಬರು 200 ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮುಖ್ಯಪೇದೆ ವಿರುದ್ಧ ಕೇಳಿಬಂದ ಆರೋಪ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಲಂಚ ಪ್ರಕರಣದಲ್ಲಿ ಮುಖ್ಯಪೇದೆಗೆ ಸ್ಥಳೀಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ನಂತರ ಈ ಪ್ರಕರಣ ಬಾಂಬೆ ಹೈಕೋರ್ಟ್‌ಗೆ ಮೆಟ್ಟಿಲೇರಿತ್ತು. 200 ರೂ.ಗಳ ಲಂಚ ಪ್ರಕರಣವು ಒಂದಲ್ಲ, ಎರಡಲ್ಲ 28 ವರ್ಷಗಳ ಕಾಲ ನಡೆದಿದೆ. ಇದೀಗ ಪೊಲೀಸ್ ಪೇದೆಗೆ ಹೈಕೋರ್ಟ್‌ನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ಆದರೆ ಮುಖ್ಯಪೇದೆ ಈಗಾಗಲೇ ನಿಧನರಾಗಿದ್ದಾರೆ.
ಮುಖ್ಯಪೇದೆಯ ಪತ್ನಿ ಮತ್ತು ಮಗಳು ಬಾಂಬೆ ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿರುದ್ಧ ಹೋರಾಡಿದ್ದಾರೆ. ಮಾರ್ಚ್ 31 ರಂದು ವಿಚಾರಣೆ ನಡೆಸಿದ ನ್ಯಾ.ಪ್ರಕಾಶ್ ನಾಯ್ಕ್ ಅವರಿದ್ದ ಪೀಠವು ಮಾರ್ಚ್ 31, 1998 ರ ಸೊಲ್ಲಾಪುರ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ಪೀಠವು, ಲಂಚದ ಬೇಡಿಕೆಯ ವಿಚಾರಣೆಯ ವಿಷಯವು ಅನುಮಾನದಲ್ಲಿದೆ ಎಂದು ಹೇಳಿದೆ. ಸಾಕ್ಷ್ಯದಲ್ಲಿನ ವ್ಯತ್ಯಾಸಗಳನ್ನು ಪರಿಗಣಿಸಿ, ಆರೋಪಿಯು ಅನುಮಾನದ ಲಾಭವನ್ನು ಪಡೆಯುತ್ತಾನೆ ಮತ್ತು ದೋಷಮುಕ್ತನಾಗಲು ಅರ್ಹನಾಗಿರುತ್ತಾನೆ ಎಂದು ಆದೇಶಿಸಿದೆ.
ಈ ಪ್ರಕರಣ ಮುಖ್ಯಪೇದೆ ನಾಗನಾಥ ಚವ್ರೆ ಅವರಿಗೆ ಸಂಬಂಧಿಸಿದುದ್ದಾಗಿದೆ. ನಾಗನಾಥ ಚವ್ರೆ ಅವರು ಕ್ರಿಮಿನಲ್ ದುರ್ನಡತೆ ಮತ್ತು ಭ್ರಷ್ಟಾಚಾರ ತಡೆ ಕಾಯಿದೆ, 1988 ರ ಅಡಿಯಲ್ಲಿ ಲಂಚ ಪಡೆದ ಆರೋಪ ಹೊತ್ತಿದ್ದರು. ನ್ಯಾಯಾಲಯವು ಅವರಿಗೆ ಎರಡೂ ಸೆಕ್ಷನ್‌ಗಳಲ್ಲಿ 1.5 ವರ್ಷ ಮತ್ತು 1 ವರ್ಷ ಶಿಕ್ಷೆ ವಿಧಿಸಿತ್ತು.