ಬಾಣಂತಿಯೊಬ್ಬಳು ಪ್ರಸವಾನಂತರ ಅಪರೂಪದ ಅಲರ್ಜಿಯಿಂದ ಬಳಲುತ್ತಿದ್ದು, ಇದು ಜಗತ್ತಿನಲ್ಲಿ 50,000 ಮಹಿಳೆಯರಲ್ಲಿ ಒಬ್ಬರಿಗೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ತನಗಾದ ವಿಚಿತ್ರ ವೇದನೆಯನ್ನು ಮಹಿಳೆ ಹಂಚಿಕೊಂಡಿದ್ದಾಳೆ.
32 ವರ್ಷದ ಫಿಯೋನಾ ಹೂಕರ್ ಎಂಬಾಕೆ ತಾನು ಗರ್ಭಿಣಿಯಿದ್ದಾಗ ಹೊಟ್ಟೆಯ ಮೇಲೆ ಗುಳ್ಳೆಗಳು ಮತ್ತು ಕೆಂಪು ತುರಿಕೆಯಂತಹ ಅಲರ್ಜಿಯಿಂದ ಬಳಲಿದ್ದಾಳೆ. ಈಕೆ 31 ವಾರಗಳ ಗರ್ಭಿಣಿಯಾಗಿದ್ದಾಗ ಹೊಟ್ಟೆಯ ಮೇಲೆ ಕೆಂಪು ತುರಿಕೆ ಇರುವುದನ್ನು ಗಮನಿಸಿದ್ದಾರೆ. ಸಮಯ ಕಳೆದಂತೆ ಅಲರ್ಜಿ ಮತ್ತಷ್ಟು ಉಲ್ಬಣಗೊಂಡಿದೆ.
ಹೆರಿಗೆಯ ನಂತರವೂ ಕೂಡ ಆಕೆ ಅಲರ್ಜಿ ಸಮಸ್ಯೆಯಿಂದ ಬಳಲಿದ್ದಾಳೆ. ಮೊದಲಿಗೆ ಈಕೆಯ ಹೊಟ್ಟೆಯ ಸುತ್ತಲೂ ತುರಿಕೆಯ ಗುರುತುಗಳು ಸಿಕ್ಕಿದವು. ತುರಿಕೆ ಹೆಚ್ಚಾದಂತೆ ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಿದ ಆಕೆಗೆ ವೈದ್ಯರು ಸ್ಟೀರಾಯ್ಡ್ ಕ್ರೀಮ್ ಅನ್ನು ನೀಡಿದ್ದಾರೆ.
ಮಗುವಿಗೆ ಜನ್ಮ ನೀಡುವ ಎರಡು ದಿನಗಳ ಮೊದಲು ತುರಿಕೆ ಸಮಸ್ಯೆ ಮತ್ತಷ್ಟು ಅಸಹನೀಯವಾಗಿದೆ. ಮಗುವಿಗೆ ಜನ್ಮ ನೀಡಿದ 24 ಗಂಟೆಗಳ ನಂತರ ಅದು ಗುಳ್ಳೆಗಳಾಗಿ ಮಾರ್ಪಟ್ಟಿತು ಎಂದು ಫಿಯೋನಾ ಹೇಳಿದ್ದಾರೆ.
ಅಲರ್ಜಿಯನ್ನು ನಿಯಂತ್ರಣದಲ್ಲಿಡಲು ಸ್ಟಿರಾಯ್ಡ್‌ಗಳು ಮತ್ತು ಕ್ರೀಮ್‌ನ್ನು ಬಳಸಬೇಕಾಯಿತು. ಅದೃಷ್ಟವಶಾತ್, ಆಕೆ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ ಆರು ತಿಂಗಳ ನಂತರ ಅಲರ್ಜಿಗಳು ಕಡಿಮೆಯಾಗುತ್ತಾ ಬಂದವು. ಇದೀಗ ಅಪರೂಪದ ಗರ್ಭಧಾರಣೆಯ ಸ್ಥಿತಿಯ ಬಗ್ಗೆ ಫಿಯೋನಾ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.