ಅಪಘಾತವೆಸಗಿದ ವಾಹನಗಳ ಕಸ್ಟಡಿ ಕುರಿತಂತೆ ಪೊಲೀಸ್ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇಂತಹ ವಾಹನಗಳನ್ನು ಮೋಟಾರು ವಾಹನ ಇನ್ಸ್ಪೆಕ್ಟರ್ ಅವರಿಂದ ತಪಾಸಣೆ ನಡೆಸಿದ ಬಳಿಕ 24 ಗಂಟೆಗಳ ಒಳಗಾಗಿ ಬಿಡುಗಡೆ ಮಾಡುವಂತೆ ಸೂಚಿಸಿದೆ.
ಮಾರಣಾಂತಿಕ ಹಾಗೂ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮಾತ್ರ ಅಪಘಾತವೆಸಗಿದ ವಾಹನಗಳನ್ನು ಉಪ ವಿಭಾಗಾಧಿಕಾರಿಗಳ ಅನುಮತಿ ಪಡೆದು ಕಸ್ಟಡಿ ಪಡೆಯಬಹುದಾಗಿದ್ದು, ಅಂತಹ ಪ್ರಕರಣಗಳಲ್ಲೂ ಸಹ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ವಾಹನ ಮಾಲೀಕರಿಗೆ ಹಸ್ತಾಂತರಿಸಬೇಕು ಎಂದು ತಿಳಿಸಲಾಗಿದೆ.
ಒಂದು ವೇಳೆ ಅಪಘಾತವೆಸಗಿದ ವಾಹನಕ್ಕೆ ವಿಮಾ ಸೌಲಭ್ಯ ಇಲ್ಲದಿದ್ದ ಪಕ್ಷದಲ್ಲಿ ಅಂತಹ ವಾಹನಗಳನ್ನು ಜಪ್ತಿ ಮಾಡಿ ನ್ಯಾಯಾಲಯದ ಗಮನಕ್ಕೆ ತರಬೇಕು. ಅಲ್ಲದೆ ನ್ಯಾಯಾಲಯ ನೀಡಬಹುದಾದ ಪರಿಹಾರ ಮೊತ್ತಕ್ಕೆ ಸಮಾನವಾದ ಮೊತ್ತವನ್ನು ಠೇವಣಿಯನ್ನು ಇರಿಸಿಕೊಂಡು ವಾಹನ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ.