ಬೆಂಗಳೂರು: ಇದೇ ಮಂಗಳವಾರ ಬೆಂಗಳೂರಿನ ಯಲಹಂಕ ಸಮೀಪ ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ 18 ವರ್ಷದ ಯುವತಿಯ ತಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಅವರ ಮಗಳ ಸ್ನೇಹಿತನ ವಿರುದ್ಧ ದೂರು ದಾಖಲಿಸಿದ್ದಾರೆ.
ಅಪಘಾತದಲ್ಲಿ ಬೆನ್ಸನ್ ಟೌನ್ ನ ಚಿನ್ನಪ್ಪ ಗಾರ್ಡನ್ ನಿವಾಸಿ ಸಾಹೇಬ ಎ, ಸಾಹೇರಾ ಅಲಿಯಾಸ್ ಸನಾ ಸಾಹೇಬ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ಜೆ.ಸಿ.ನಗರದಲ್ಲಿ ವಾಸವಿರುವ 18 ವರ್ಷದ ಆಕೆಯ ಸ್ನೇಹಿತ ಜಿಶಾನ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಯಲಹಂಕ ಸಂಚಾರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸನಾ ತಂದೆ ಮೊಹಮ್ಮದ್ ಇಕ್ಬಾಲ್, ಜಿಶಾನ್ ವಿರುದ್ಧ ಆರೋಪಿಸಿದ್ದಾರೆ. ಜಿಶಾನ್ ತನ್ನ ಮೋಟಾರುಬೈಕನ್ನು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಕಾರಣ, ನಿಯಂತ್ರಣ ಕಳೆದುಕೊಂಡ ಬೈಕ್ ಅಪಘಾತಕ್ಕೀಡಾಗಿ ಮಗಳು ಮೃತಪಟ್ಟಿರುವುದಾಗಿ ತಂದೆ ದೂರಿದ್ದಾರೆ.
ಬೈಪಾಸ್ ಸಿಗ್ನಲ್ ಬಳಿಯ ಮೇಲ್ಸೇತುವೆ ಮತ್ತು ಮೀಡಿಯನ್‌ಗೆ ಅಪ್ಪಳಿಸಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಸನಾ ಅವರ ಹೆಲ್ಮೆಟ್ ತೆರೆದು ಆಕೆಯ ತಲೆ ನೆಲಕ್ಕೆ ಅಪ್ಪಳಿಸಿ ಮೃತಪಟ್ಟಿದ್ದಾಳೆ. ಜಿಶಾನ್‌ನ ಬಲಗೈಗೆ ಭಾರಿ ಏಟು ಬಿದ್ದಿದೆ.
ಈತನ ಜತೆಗೆ, ಸನಾಳ ತಂದೆ ಕಳಪೆ ಕಾಮಗಾರಿಯಿಂದಾಗಿ ಹೀಗಾಗಿರುವುದಾಗಿ ಸಹಾಯಕ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧವೂ ದೂರು ದಾಖಲು ಮಾಡಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.