ಅಪಘಾತದಲ್ಲಿ ಹೆತ್ತವರನ್ನು ಕಳೆದುಕೊಂಡ ಮೂವರು ಮಕ್ಕಳಿಗೆ ರಾಜಸ್ತಾನದ ಭರತಪುರ ಜಿಲ್ಲೆಯ ಪೊಲೀಸ್ ಒಬ್ಬರು ಆಪತ್ಬಾಂಧವನಾಗಿದ್ದಾರೆ. ಗಾಯಯೊಂಡಿದ್ದ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿರುವ ಪೊಲೀಸ್ ಪೇದೆ ಲೋಕೇಂದ್ರ ಚಹರ್, ಆ ಖರ್ಚುವೆಚ್ಚಗಳನ್ನು ತಾವೇ ಭರಿಸುತ್ತಿದ್ದಾರೆ.
ಖಾಂಗ್ರಿ ಗ್ರಾಮದ ಸೋನು ಹಾಗೂ ಸುಮನ್ ತಮ್ಮ ಮೂವರು ಮಕ್ಕಳೊಂದಿಗೆ ಬಸ್ಸಿಗಾಗಿ ಕಾಯುತ್ತ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.
ಪುಟ್ಟ ಮಗು ಅದೃಷ್ಟವಶಾತ್ ಬಚಾವ್ ಆಗಿದೆ. ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಬಂದ ಪೇದೆ ಲೋಕೇಂದ್ರ, ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರು. ಕಚೇರಿಗೆ ರಜೆ ಹಾಕಿ ಮಕ್ಕಳ ಶುಶ್ರೂಷೆಗೆ ನಿಂತ್ರು.
ಗಾಯಗೊಂಡಿದ್ದ ಮಕ್ಕಳೀಗ ಚೇತರಿಸಿಕೊಂಡಿದ್ದಾರಂತೆ. ಆದ್ರೆ ಹೆತ್ತವರು ಇನ್ನಿಲ್ಲ ಅನ್ನೋ ಆಘಾತಕಾರಿ ಸಂಗತಿ ಅವರಿಗಿನ್ನೂ ತಿಳಿದಿಲ್ಲ. ಪೇದೆ ಲೋಕೇಂದ್ರ ಅವರ ತಂದೆ-ತಾಯಿ ಕೂಡ ಇದೇ ರೀತಿ ಅಪಘಾತಕ್ಕೆ ಬಲಿಯಾಗಿದ್ದರು.
ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡು ಸಾಕಷ್ಟು ನೋವುಂಡಿದ್ದ ಲೋಕೇಂದ್ರ, ಈ ಪುಟ್ಟ ಮಕ್ಕಳ ಸ್ಥಿತಿ ನೋಡಿ ಕರಗಿದ್ದಾರೆ. ಅವರ ಆರೈಕೆಗೆ ನಿಂತಿದ್ದಾರೆ. ಪೇದೆಯ ಹೃದಯ ವೈಶಾಲ್ಯತೆಯನ್ನು ಸಾಕಷ್ಟು ಜನರು ಮೆಚ್ಚಿಕೊಂಡಿದ್ದು, ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.