ಅಪಘಾತದಲ್ಲಿ ಮೃತಪಟ್ಟ ತನ್ನ ಪತಿಯ ಶವ ನೋಡುತ್ತಿದ್ದಂತೆ ಹೃದಯಾಘಾತದಿಂದ ಪತ್ನಿಯೂ ಸಾವನ್ನಪ್ಪಿರುವ ಕರುಣಾಜನಕ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ನಡೆದಿದೆ.
ಹೊಳಲ್ಕೆರೆ ತಾಲೂಕಿನ ಕುಡಿನೀರಕಟ್ಟೆ ಗ್ರಾಮದ ಗೇಟ್ ಬಳಿ ಭಾನುವಾರದಂದು ನಡೆದ ಅಪಘಾತದಲ್ಲಿ ನಿವೃತ್ತ ಶಿಕ್ಷಕ ಮಹೇಶ್ವರಪ್ಪ ಎಂಬವರು ಮೃತಪಟ್ಟಿದ್ದರು.
ಬೈಕಿನಲ್ಲಿ ಮಹೇಶ್ವರಪ್ಪ ಅವರು ಹೋಗುತ್ತಿದ್ದಾಗ ಕಾರು ಡಿಕ್ಕಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಅವರ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದು, ಮಹೇಶ್ವರಪ್ಪ ಅವರ ಪತ್ನಿ ಅನ್ನಪೂರ್ಣಮ್ಮ ಅಲ್ಲಿಗೆ ಬಂದ ವೇಳೆ ಪತಿಯ ಶವ ನೋಡುತ್ತಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಅಲ್ಲಿಯೇ ಸಾವನ್ನಪ್ಪಿದ್ದಾರೆ.
ಪತಿ-ಪತ್ನಿ ಒಂದೇ ದಿನ ಸಾವನ್ನಪ್ಪಿರುವ ಘಟನೆಯಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.