ಶಿವಮೊಗ್ಗ: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದ ಕಾರಣ ಕರುನಾಡು 50 ದಿನಗಳಿಗೂ ಅಧಿಕ ಕಾಲ ಸ್ತಬ್ಧವಾಗಿತ್ತು. ಇದೀಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹಂತಹಂತವಾಗಿ ಲಾಕ್ಡೌನ್ ಸಡಿಲಗೊಳಿಸಲಾಗುತ್ತಿದೆ. ಇದರ ಪರಿಣಾಮ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ.
ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ ಸಹ ಶಿವಮೊಗ್ಗದಲ್ಲಿ ಆರಂಭಗೊಂಡಿದ್ದು, ಈಗಾಗಲೇ ಎಲ್ಲದರ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಾರ್ವಜನಿಕರಿಗೆ ಮತ್ತೊಂದು ಹೊರೆ ಬಿದ್ದಿದೆ. ಗುರುವಾರದಿಂದ ರಸ್ತೆಗಿಳಿದಿರುವ ಖಾಸಗಿ ಬಸ್ಸುಗಳು ಶೇ.20ರಷ್ಟು ಪ್ರಯಾಣ ದರ ಏರಿಕೆ ಮಾಡಿದ್ದು, ಇದು ಪ್ರಯಾಣಿಕರಿಗೆ ಕಷ್ಟಕರವಾಗಿ ಪರಿಣಮಿಸಿದೆ.
ಆದರೆ ಪ್ರಯಾಣ ದರ ಏರಿಕೆ ಕುರಿತಂತೆ ಬಸ್ ಮಾಲೀಕರುಗಳು ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ ಡೀಸೆಲ್ ದರ 56 ರೂ. ಗಳಿದ್ದಾಗ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಇದೀಗ ಡೀಸೆಲ್ ದರ 93 ರೂಪಾಯಿ ದಾಟಿದೆ. ಜೊತೆಗೆ ಬಿಡಿಭಾಗಗಳ ಬೆಲೆ ಸಹ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.