ಬೆಂಗಳೂರು: ಸರ್ಕಾರಿ ನೌಕರನ ಎರಡನೇ ಪತ್ನಿ ಮಕ್ಕಳಿಗೂ ಅನುಕಂಪದ ನೌಕರಿ ನೀಡುವ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಸರ್ಕಾರಿ ನೌಕರನ ಕಾನೂನುಬಾಹಿರ ಎರಡನೇ ಪತ್ನಿ ಅಥವಾ ನಂತರದ ಪತ್ನಿಯಿಂದ ಜನಿಸಿದ ಮಕ್ಕಳನ್ನು ಕೂಡ ಅನುಕಂಪದ ಆಧಾರದ ಮೇಲೆ ನೇಮಕಾತಿ ಗೆ ಪರಿಗಣಿಸುವಂತೆ ಆದೇಶಿಸಲಾಗಿದೆ.
ಸುಪ್ರೀಂಕೋರ್ಟ್ ಕಳೆದ ಫೆ. 24 ರಂದು ಸರ್ಕಾರಿ ನೌಕರರ ಎರಡನೇ ಪತ್ನಿಯಿಂದ ಜನಿಸಿದ ಮಕ್ಕಳು ಎನ್ನುವ ಕಾರಣಕ್ಕೆ ತಾರತಮ್ಯ ಮಾಡುವಂತಿಲ್ಲ. ಅಂತಹ ಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಪರಿಗಣಿಸದಿರುವುದು ಸೂಕ್ತವಲ್ಲ ಎಂದು ಹೇಳಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಸಿವಿಲ್ ಸೇವಾ ಅನುಕಂಪ ಆಧಾರದ ಮೇಲೆ ನೇಮಕಾತಿ ನಿಯಮಗಳನ್ವಯ ಸರ್ಕಾರಿ ನೌಕರರು ಸೇವೆಯಲ್ಲಿರುವಾಗ ಮೃತಪಟ್ಟ ಸಂದರ್ಭದಲ್ಲಿ ಅವರ ಅವಲಂಬಿತರಲ್ಲಿ ಒಬ್ಬರಿಗೆ ನಿಯಮಗಳಲ್ಲಿ ನಿಗಪಡಿಸಿರುವ ಷರತ್ತು ಮತ್ತು ನಿಬಂಧನೆಗಳನ್ನು ಪೂರೈಸುವ ಷರತ್ತಿಗೆ ಒಳಪಟ್ಟು ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಬಹುದಾಗಿದೆ.
ನಿಯಮ ಎರಡರಲ್ಲಿ ಕುಟುಂಬ ಪದದ ಅರ್ಥ ವ್ಯಾಖ್ಯಾನಿಸಿ ಸಂದರ್ಭನುಸಾರ ಪತ್ನಿ, ಪತಿ, ಮಗ ಅಥವಾ ಮಗಳಿಗೆ ಉದ್ಯೋಗ ಪಡೆಯಬಹುದಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದ ಸುತ್ತೋಲೆ ಹಿಂಪಡೆಯಲಾಗಿದೆ.