
ಸ್ವಚ್ಛತೆ, ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮುಖ್ಯ. ಸ್ವಚ್ಛತೆ, ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲ, ಧನಾತ್ಮಕ ಚಿಂತನೆಗೂ ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ದೇಹದ ಎಲ್ಲ ಭಾಗಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಅನೇಕರು ಪ್ರತಿ ದಿನ ಸ್ನಾನ ಮಾಡುತ್ತಾರೆ. ಆದ್ರೆ ಕೆಲ ಭಾಗಗಳನ್ನು ನಿರ್ಲಕ್ಷ್ಯಿಸುತ್ತಾರೆ. ಖಾಸಗಿ ಅಂಗಗಳ ಸ್ವಚ್ಛತೆ ಜೊತೆಗೆ ಈ ಅಂಗಗಳನ್ನು ಸ್ವಚ್ಛಗೊಳಿಸಬೇಕು.
ದೇಹದ ಕೆಲವು ಭಾಗಗಳಲ್ಲಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಸಂಗ್ರಹವಾಗುತ್ತವೆ. ಇದ್ರಿಂದ ರೋಗವುಂಟಾಗುತ್ತದೆ. ಹಾಗಾಗಿ ಆ ಭಾಗಗಳನ್ನು ಪ್ರತಿ ದಿನ ಸ್ವಚ್ಛಗೊಳಿಸಬೇಕು.
ಪ್ರತಿ ದಿನ ಎದ್ದ ತಕ್ಷಣ ಅನೇಕರು ಬ್ರಷ್ ಮಾಡ್ತಾರೆ. ಆದ್ರೆ ನಾಲಿಗೆ ಸ್ವಚ್ಛಗೊಳಿಸುವುದನ್ನು ಮರೆಯುತ್ತಾರೆ. ನಾಲಿಗೆ ಮೇಲೆ ಅನೇಕ ಗೆರೆ ಹಾಗೂ ಉಬ್ಬುಗಳಿವೆ. ಇದರಲ್ಲಿ ಬ್ಯಾಕ್ಟೀರಿಯಾಗಳು ಅಡಗಿಕೊಳ್ಳುತ್ತವೆ. ಅನೇಕ ಬಾರಿ ಬಾಯಿ ವಾಸನೆ ಬರಲು ಇದು ಕಾರಣವಾಗುತ್ತದೆ. ಪ್ರತಿ ದಿನ ಹಲ್ಲಿನಂತೆ ನಾಲಿಗೆ ಸ್ವಚ್ಛಗೊಳಿಸಬೇಕು.
ಜನರು ವ್ಯಾಯಾಮ ಮಾಡಿದಾಗ ದೇಹದ ಎಲ್ಲ ಭಾಗ ಬೆವರುತ್ತದೆ. ಬೆವರು, ತೊಡೆಯ ಮೇಲಿನ ಭಾಗದಲ್ಲಿ ಸಂಗ್ರಹವಾಗಲು ಆರಂಭಿಸುತ್ತದೆ. ಇದು ತುರಿಕೆ ಸಮಸ್ಯೆಯನ್ನುಂಟು ಮಾಡುತ್ತದೆ.
ಹೊಕ್ಕುಳಲ್ಲಿ ಬೆವರು ಸಂಗ್ರಹವಾಗುತ್ತದೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಸ್ನಾನ ಮಾಡುವಾಗ ಹೊಕ್ಕಳನ್ನು ಸ್ವಚ್ಛಗೊಳಿಸಿ.
ಕಿವಿಗಳ ಹಿಂದೆ ಮಣ್ಣು ಸೇರಿಕೊಳ್ಳುತ್ತದೆ. ಇದ್ರಿಂದ ರೋಗಗಳು ಹರಡುತ್ತವೆ. ಒಂದು ವೇಳೆ ಅಲ್ಲಿ ಸ್ವಚ್ಛಗೊಳಿಸದೆ ಹೋದಲ್ಲಿ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ.
ಕೈಗಳನ್ನು ಅನೇಕ ಬಾರಿ ನಾವು ಸ್ವಚ್ಛಗೊಳಿಸುತ್ತೇವೆ. ಆದ್ರೆ ಉಗುರಿನ ಕೆಳ ಭಾಗದಲ್ಲಿರುವ ಕೊಳಕನ್ನು ಸ್ವಚ್ಛಗೊಳಿಸುವುದಿಲ್ಲ. ಇದು ನೇರವಾಗಿ ನಮ್ಮ ದೇಹ ಸೇರುತ್ತದೆ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.