ಏನನ್ನಾದರೂ ಸಾಧಿಸಬೇಕು ಅನ್ನೋ ಛಲವಿದ್ರೆ ಎಂತಹ ಸವಾಲನ್ನು ಕೂಡ ಮೆಟ್ಟಿ ನಿಲ್ಲಬಹುದು. ನಮ್ಮಲ್ಲಿನ ಕೆಲವು ವಿದ್ಯಾರ್ಥಿಗಳು ಇದನ್ನು ಸಾಬೀತು ಮಾಡಿದ್ದಾರೆ. ಆ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ವಿದ್ಯಾರ್ಥಿಗಳ ಗುಂಪೊಂದು ರೈಲ್ವೇ ನಿಲ್ದಾಣದಲ್ಲಿ ಕುಳಿತು ಓದುತ್ತಿರುವುದನ್ನು ಈ ಫೋಟೋದಲ್ಲಿ ಕಾಣಬಹುದು. ಈ ಫೋಟೋ ಬಿಹಾರದ ಸಸಾರಂ ರೈಲ್ವೆ ನಿಲ್ದಾಣದ್ದು. ಇಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾರೆ.
ಈ ಚಿತ್ರವನ್ನು ರೈಲ್ವೆ ಅಧಿಕಾರಿಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲೇನು ನಡೆಯುತ್ತಿದೆ ಎಂಬ ಬಗ್ಗೆ ಸಹ ಮಾಹಿತಿ ನೀಡಿದ್ದಾರೆ. ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ಮತ್ತು 2 ಅನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 2 ಗಂಟೆಗಳ ಕಾಲ ಅಧ್ಯಯನ ತರಗತಿಗಳಾಗಿ ಪರಿವರ್ತಿಸಲಾಗುತ್ತದೆ. ಇಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಾಗುತ್ತಿರುವ ಯುವ ವಿದ್ಯಾರ್ಥಿಗಳು, ಐಐಟಿ ಮತ್ತು ಐಐಎಂಗಳಲ್ಲಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ.
2002 ರಿಂದಲೂ ಈ ರೀತಿ ನಡೆದುಕೊಂಡು ಬಂದಿದೆ. ವಿದ್ಯಾರ್ಥಿಗಳು ಕೋಚಿಂಗ್‌ಗೆ ಹೋಗುವ ಬದಲು ರೈಲ್ವೆ ಸ್ಟೇಶನ್‌ಗೇ ಯಾಕೆ ಬರ್ತಾರೆ ಅನ್ನೋ ಪ್ರಶ್ನೆ ಕೂಡ ಎಲ್ಲರನ್ನು ಕಾಡಬಹುದು. 2002ರಲ್ಲಿ ಕೆಲವು ವಿದ್ಯಾರ್ಥಿಗಳು ನಿಲ್ದಾಣಕ್ಕೆ ಬಂದು ಅಧ್ಯಯನ ಮಾಡಲು ಪ್ರಾರಂಭಿಸಿದರು. ಯಾಕಂದ್ರೆ ಇಲ್ಲಿ 24 ಗಂಟೆ ವಿದ್ಯುತ್ ಇರುತ್ತಿತ್ತು. ಮನೆಯಲ್ಲಿ ಆಗಾಗ ಕರೆಂಟ್ ಕೈಕೊಡುತ್ತಿದ್ದರಿಂದ ಸರಿಯಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ಆರಂಭವಾದ ಈ ಪರಿಪಾಠ 20 ವರ್ಷಗಳಿಂದ್ಲೂ ನಡೆದುಕೊಂಡು ಬಂದಿದೆ.