ಮಳೆ ಬಂದ ಸಂದರ್ಭದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಲೆದೋರಿದ ಪರಿಸ್ಥಿತಿ ರಾಷ್ಟ್ರದಾದ್ಯಂತ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತಿದ್ದರೆ, ಮನೆಗಳಲ್ಲಿ ಏಳೆಂಟು ಅಡಿಯವರೆಗೆ ನೀರು ನುಗ್ಗಿತ್ತು.
ಈ ಸಂದರ್ಭದಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿರುವುದೇ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬಂದಿದ್ದು, ಹೀಗಾಗಿ ಸರ್ಕಾರದ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಒತ್ತುವರಿ ತೆರವಿಗೆ ಮುಂದಾಗಿತ್ತು.
ಒತ್ತುವರಿ ತೆರವಿಗೆ ಆರಂಭ ಶೂರತ್ವ ತೋರಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳು, ಬಡ ಮತ್ತು ಮಧ್ಯಮ ವರ್ಗದವರ ಒತ್ತುವರಿ ತೆರವುಗೊಳಿಸಿದ್ದರು. ಯಾವಾಗ ಪ್ರಭಾವಿಗಳ ಕಟ್ಟಡಗಳು ಪಟ್ಟಿಗೆ ಬಂದವೋ ಆಗ ಕಾರ್ಯಾಚರಣೆಗೆ ವಿಳಂಬ ಧೋರಣೆ ಅನುಸರಿಸಲಾಯಿತು.
ಇದೀಗ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಮುಗಿದ ಬೆನ್ನಲ್ಲೇ ಒತ್ತುವರಿ ತೆರವು ಕಾರ್ಯಾಚರಣೆಯೂ ಸಹ ಸ್ಥಗಿತಗೊಂಡಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಾರ್ಯಾಚರಣೆ ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಇದನ್ನು ನಿರಾಕರಿಸಿರುವ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಹೇಳಿದೆ.