ಆರೋಗ್ಯಕರ ಉಪಹಾರವನ್ನು ಪ್ರತಿಯೊಬ್ಬರೂ ಸೇವನೆ ಮಾಡುವುದು ಉತ್ತಮ. ಅನೇಕರು ಕಚೇರಿಗೆ ಹೊರಡುವ ಆತುರದಲ್ಲಿ ಬೆಳಗಿನ ಉಪಹಾರವನ್ನೇ ತ್ಯಜಿಸಿಬಿಡುತ್ತಾರೆ. ಇದು ಅಪಾಯಕಾರಿ. ಬೆಳಗ್ಗೆ ಆರೋಗ್ಯಕರವಾದ ತಿನಿಸುಗಳನ್ನು ಸೇವಿಸಿ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಉಪಹಾರವನ್ನು ತ್ಯಜಿಸುವುದರಿಂದ ಲಿಪೊಪ್ರೋಟೀನ್ (LDL) ಹೆಚ್ಚಾಗುತ್ತದೆ ಮತ್ತು ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಗಂಭೀರ ಕಾಯಿಲೆಗಳು ಬರುತ್ತವೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬೆಳಗಿನ ಉಪಾಹಾರದಲ್ಲಿ ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವಿಸಬೇಕು. ಅವು ಯಾವುದು ಅನ್ನೋದನ್ನು ನೋಡೋಣ.
ಓಟ್ಮೀಲ್ – ಓಟ್ ಮೀಲ್ ಬೆಳಗಿನ ಉಪಾಹಾರಕ್ಕೆ ಹೇಳಿಮಾಡಿಸಿದಂತಿರುತ್ತದೆ. ಇದು ಕರಗಬಲ್ಲ ಫೈಬರ್ ಅನ್ನು ಹೊಂದಿರುತ್ತದೆ. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ತೆಗೆದುಹಾಕಲು ಇದು ಸಹಕಾರಿ. ಓಟ್ ಮೀಲ್‌ಗೆ ಕತ್ತರಿಸಿದ ಸೇಬು, ಪೇರಳೆ ಅಥವಾ ರಾಸ್ ಬೆರ್ರಿಗಳನ್ನು ಸೇರಿಸಿಕೊಂಡು ತಿನ್ನಿ.
ಕಿತ್ತಳೆ – ಕಿತ್ತಳೆ ತುಂಬಾ ಸಾಮಾನ್ಯವಾದ ಹಣ್ಣು, ಅದರ ರಸವನ್ನು ವಿಟಮಿನ್ ಸಿಯ ಸಮೃದ್ಧ ಮೂಲವೆಂದು ಪರಿಗಣಿಸಲಾಗುತ್ತದೆ. ಕಿತ್ತಳೆಯನ್ನು ನಾರಿನ ಜೊತೆಗೆ ತಿನ್ನುವುದು ಉತ್ತಮ. ಇದರಿಂದ ನೀವು ಸಾಕಷ್ಟು ಫೈಬರ್ ಅನ್ನು ಪಡೆಯುತ್ತೀರಿ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಕಿತ್ತಳೆ ಜ್ಯೂಸ್ ಕುಡಿಯುವುದರಿಂದಲೂ ಅನೇಕ ಪ್ರಯೋಜನಗಳಿವೆ.
ಸ್ಮೋಕ್ಡ್ ಸಾಲ್ಮನ್ – ಸಾಲ್ಮನ್ ಫಿಶ್‌ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಇದರ ಸೇವನೆಯಿಂದ ಆರೋಗ್ಯಕರ ಕೊಬ್ಬು ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು. ರಕ್ತದಲ್ಲಿ ಇರುವ ಟ್ರೈಗ್ಲಿಸರೈಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಇದಕ್ಕಾಗಿ, ನೀವು ಟೊಮೆಟೊ, ಎಳ್ಳಿನಂತಹ ಪದಾರ್ಥಗಳಿಂದ ಗಾರ್ನಿಶ್ ಮಾಡಿಕೊಂಡು ಸ್ಮೋಕ್ಡ್ ಸಾಲ್ಮನ್ ಸೇವನೆ ಮಾಡಬಹುದು.
ಮೊಟ್ಟೆಯ ಬಿಳಿಭಾಗ– ಉತ್ತಮ ಪೌಷ್ಟಿಕಾಂಶವುಳ್ಳ ಉಪಹಾರ ಸೇವಿಸುವ ಇಚ್ಛೆಯಿದ್ದರೆ ಮೊಟ್ಟೆಯ ಬಿಳಿಭಾಗವನ್ನು ಆಯ್ದುಕೊಳ್ಳಿ. ಅದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದಿಲ್ಲ ಮತ್ತು ಉತ್ತಮ ಪ್ರಮಾಣದ ಪ್ರೋಟೀನ್ ಮೊಟ್ಟೆಯ ಬಿಳಿಭಾಗದಲ್ಲಿರುತ್ತದೆ. ಇದು ಹೃದಯಾಘಾತದ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.