ಸಾಧನೆ ಮಾಡೋ ಹಂಬಲವಿದ್ದರೆ ದೈಹಿಕ ನ್ಯೂನತೆ ಅಡ್ಡಿ ಬರೋದಿಲ್ಲ. ಸಾಧಿಸೋ ಮನಸ್ಸಿದ್ದರೆ ಸಮುದ್ರದಲ್ಲಿ ಬಿಸಾಕಿದ್ರೂ ಈಜಿ ದಡ ಸೇರಬಹುದು ಅನ್ನೋ ಮಾತಿದೆ. ಇದಕ್ಕೆ ಪೂರಕವೆಂಬಂತೆ ವ್ಯಕ್ತಿಯೊಬ್ಬರು ಮಾಡಿರೋ ಈ ಸಾಹಸ ಗಿನ್ನಿಸ್ ವಿಶ್ವದಾಖಲೆಯ ಪುಟ ಸೇರಿದೆ.
ಹೌದು, ಅಂಧ ವ್ಯಕ್ತಿಯ ಕಾರ್ ರೇಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 10 ವರ್ಷಗಳ ಹಿಂದೆ ಅಪಘಾತಕ್ಕೀಡಾದ ಕಾರ್ ರೇಸರ್ ಒಬ್ಬರ ವಿಡಿಯೋ ಇದು. ಕಾರು ಅಪಘಾತಕ್ಕೀಡಾದ ಬಳಿಕ ಅವರು ತಮ್ಮ ದೃಷ್ಟಿ ಕಳೆದುಕೊಂಡಿದ್ದರು. ಇದೀಗ ತಮ್ಮ ದೃಷ್ಟಿ ಕಳೆದುಕೊಂಡರೂ ಛಲ ಬಿಡದ ಅವರು ಸಾಧನೆ ಮಾಡಿದ್ದಾರೆ. ಗಂಟೆಗೆ 339.64 ಕಿ.ಮೀ ವೇಗದಲ್ಲಿ ಕಸ್ಟಮೈಸ್ಡ್ ಕಾರನ್ನು ಓಡಿಸಿ ದಾಖಲೆ ಬರೆದಿದ್ದಾರೆ.
ಈ ಸಾಧನೆ ಮಾಡಿದವರ ಹೆಸರು ಡ್ಯಾನ್ ಪಾರ್ಕರ್. ಮಾರ್ಚ್ 31 ರಂದು ನ್ಯೂ ಮೆಕ್ಸಿಕೋದ ಸ್ಪೇಸ್‌ಪೋರ್ಟ್ ಅಮೆರಿಕಾ ಈ ಘಟನೆಗೆ ಸಾಕ್ಷಿಯಾಯಿತು. ಪಾರ್ಕರ್ ಗಂಟೆಗೆ 322.68 ಕಿ.ಮೀ ಕಾರು ಓಡಿಸಿ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಪಾರ್ಕರ್ 7 ವರ್ಷಗಳ ಹಿಂದೆ ಇದೇ ದಿನಾಂಕದಂದು ಲೂಯಿಸಿಯಾನ ಅಂಧರಿಗಾಗಿ ಇರುವ ಕೇಂದ್ರದಿಂದ ಪದವಿ ಪಡೆದಿದ್ದಾರೆ. ಡ್ಯಾನ್ ಪಾರ್ಕರ್ ಅವರು ವಾಹನವನ್ನು ನಿಯಂತ್ರಿಸಲು ಸಹಾಯ ಮಾಡಿದ ಆಡಿಯೊ ಮಾರ್ಗದರ್ಶನ ವ್ಯವಸ್ಥೆಯನ್ನು ಬಳಸಿದ್ದಾರೆ. ಈ ಮೂಲಕ ಅಂಧ ವ್ಯಕ್ತಿಯೊಬ್ಬರು ಅತ್ಯಂತ ವೇಗವಾಗಿ ಕಾರು ಚಲಾಯಿಸುವ ಮೂಲಕ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.