ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಒಂದು ದಿನ ಬಾಕಿ ಉಳಿದಿದೆ. ದೇಶದ ಜನತೆ ಹಾಗೂ ವಿವಿಧ ಸಂಘಟನೆಗಳು ಈಗಾಗಲೇ ತಮ್ಮದೇ ಆದ ಶೈಲಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಕೆಲವರು ತಮ್ಮ ಮನೆಯಲ್ಲಿಯೇ ತ್ರಿವರ್ಣ ಧ್ವಜವನ್ನು ಹಾರಿಸಿದರೆ, ಇನ್ನು ಕೆಲವರು ರಾಷ್ಟ್ರ ಧ್ವಜದ ಜೊತೆಯಲ್ಲಿ ಮೆರವಣಿಗೆ, ಜಾಥಾಗಳನ್ನು ಮಾಡುತ್ತಿದ್ದಾರೆ.
ಅದೇ ರೀತಿ ಚಂಡೀಘಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಎನ್ಐಡಿ ಫೌಂಡೇಶನ್ನ ಸ್ವಯಂ ಸೇವಕರು ಒಟ್ಟಾಗಿ ಅತೀ ದೊಡ್ಡ ಮಾನವ ಬಾವುಟವನ್ನು ರೂಪಿಸಿದ್ದಾರೆ. ಈ ತ್ರಿವರ್ಣ ಧ್ವಜದ ಮೂಲಕ ಅವರು ದಾಖಲೆಯನ್ನೂ ಬರೆದಿದ್ದಾರೆ.
ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಹರ್ ಘರ್ ತಿರಂಗಾ ಅಭಿಯಾನವನ್ನು ಗೌರವಿಸಲು, ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು NID ಫೌಂಡೇಶನ್ ಜೊತೆ ಸೇರಿ ಮಾನವ ತ್ರಿವರ್ಣ ಧ್ವಜವನ್ನು ರೂಪಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಧ್ವಜವು ಗಾಳಿಯಲ್ಲಿ ಬೀಸುತ್ತಿರುವ ರೀತಿಯಲ್ಲಿ ವಿದ್ಯಾರ್ಥಿಗಳೇ ಕೇಸರಿ ಬಿಳಿ ಹಾಗೂ ಹಸಿರು ಬಣ್ಣದ ಅಂಗಿಯನ್ನು ತೊಟ್ಟು ನಿಲ್ಲುವ ಮೂಲಕ ರೂಪಿಸಲಾಗಿದೆ. ಚಂಡೀಗಢದ ಸೆಕ್ಟರ್ 16ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಸಾಧನೆಯನ್ನು ಮಾಡಲಾಗಿದೆ.
ಹರ್ಘರ್ ತಿರಂಗಾ ಅಭಿಯಾನಕ್ಕೆ ಮತ್ತೊಂದು ಗರಿಯಂತೆ ಇರುವ ಈ ಐತಿಹಾಸಿಕ ತ್ರಿವರ್ಣ ಧ್ವಜ ರಚನೆಯ ಭಾಗವಾಗಿರುವುದಕ್ಕೆ ಸಂತೋಷವಿದೆ. ಚಂಡೀಘಡದ ವಿದ್ಯಾರ್ಥಿಗಳ ದೊಡ್ಡ ಸಾಮೂಹಿಕ ಪ್ರಯತ್ನ ಇದಾಗಿದೆ. ಹರ್ ಘರ್ ತಿರಂಗಾದೆಡೆಗೆ ಯುವಕರ ರಾಷ್ಟ್ರವ್ಯಾಪಿ ಉತ್ಸಾಹವು ಶ್ಲಾಘನೀಯವಾಗಿದೆ ಎಂದು ರಾಜಕಾರಣಿಯೊಬ್ಬರು ಟ್ವೀಟ್ ಮಾಡಿದ್ದಾರೆ .