ಮಕ್ಕಳಿರಬಹುದು, ವಯಸ್ಕರಿರಬಹುದು. ಕೆಲವೊಮ್ಮೆ ವಿಪರೀತ ಸಿಟ್ಟು ಬಂದು ಎಲ್ಲರ ಮೇಲೆ ಕೂಗಾಡಿ ತಾಳ್ಮೆ ಕಳೆದುಕೊಂಡು ಬಿಡುತ್ತಾರೆ. ಇದು ಹುಟ್ಟಿನಿಂದ ಬರುವಂತದ್ದಲ್ಲ. ಮನೆಯಲ್ಲಿ ದೊಡ್ಡವರನ್ನು ನೋಡಿ ಮಕ್ಕಳು ಸಿಟ್ಟು ಕಲಿತುಕೊಳ್ಳುತ್ತಾರೆ.
ಸಿಟ್ಟು ತನ್ನಿಂತಾನೇ ಕಡಿಮೆಯಾವುದು ಕಷ್ಟ. ಕೋಪ ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಬೇಕಾದ್ದು ನಿಮ್ಮ ಕೈಯಲ್ಲೇ ಇರುತ್ತದೆ. ತನ್ನ ಆರೋಗ್ಯಕ್ಕೂ, ತನ್ನ ಸುತ್ತಲಿನವರ ಆರೋಗ್ಯಕ್ಕೂ ಕೋಪ ಒಳ್ಳೆಯದಲ್ಲ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಿ.
ಕೋಪಿಷ್ಠರೊಂದಿಗೆ ಬದುಕುವುದು ಕಷ್ಟ ಎಂದಲ್ಲ. ಆದರೆ ಅದನ್ನು ನಿವಾರಿಸುವ ಮತ್ತು ಪರಿಹರಿಸುವ ಚಾಕಚಕ್ಯತೆಯನ್ನು ಕಲಿತುಕೊಳ್ಳುವುದು ಬಹಳ ಮುಖ್ಯ. ಯಾವಾಗ ಕೋಪ ಬರುತ್ತದೆ ಎಂಬುದನ್ನು ಮೊದಲು ತಿಳಿದುಕೊಂಡರೆ ಆ ಸಂಗತಿಗಳಿಂದ ಆದಷ್ಟು ದೂರವಿರುವ ಪ್ರಯತ್ನ ಮಾಡಬಹುದು.
ಕೂಲ್ ಆಗಿರುವ ವಾತಾವರಣವನ್ನು ನಿಮ್ಮ ಸುತ್ತ ಸೃಷ್ಟಿಸಿಕೊಳ್ಳುವುದರಿಂದ, ಧ್ಯಾನ ಯೋಗದಲ್ಲಿ ಹೆಚ್ಚಿನ ಸಮಯ ಮೀಸಲಿಡುವುದರಿಂದ ನಿಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳಬಹುದು. ಹೀಗಿದ್ದೂ ನಿಮ್ಮ ಸಿಟ್ಟು ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದಾದರೆ ಮಾನಸಿಕ ತಜ್ಞರನ್ನು ಭೇಟಿಯಾಗುವುದು ಒಳ್ಳೆಯದು.