ಬೇಸಿಗೆಯಲ್ಲಿ ವಿಪರೀತ ಸೆಖೆ ಮತ್ತು ಬೆವರು ಬೇಸರ ತರಿಸಿದ್ರೂ ಸಮುದ್ರ ತೀರದಲ್ಲಿ ತಂಗಾಳಿ ಸವಿಯುತ್ತ, ಐಸ್ ಕ್ರೀಮ್ ತಿನ್ನೋದು ತುಂಬಾನೇ ಮಜವಾಗಿರುತ್ತದೆ. ಸ್ನೇಹಿತರೊಂದಿಗೆ ವಾಟರ್ ಪಾರ್ಕ್‌ಗಳಲ್ಲಿ ಎಂಜಾಯ್ ಮಾಡಬಹುದು. ಹಿಲ್ ಸ್ಟೇಶನ್ ಗಳಿಗೆ ಪ್ರವಾಸ ಹೋಗಬಹುದು.
ಆದ್ರೆ ಬೇಸಿಗೆಯಲ್ಲಿ ಚರ್ಮದ ಸಮಸ್ಯೆಗಳು ಅಧಿಕ. ಎಣ್ಣೆಯುಕ್ತ ಚರ್ಮ, ಕಪ್ಪು ಚುಕ್ಕೆಗಳು ಮತ್ತು ಮೊಡವೆಗಳು ಹೆಚ್ಚಾಗುತ್ತವೆ. ಸೂರ್ಯನ ಬೆಳಕಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಅತಿಯಾದ ಬೆವರುವಿಕೆ, ಹೆಚ್ಚಿದ ಮೇದೋಗ್ರಂಥಿಗಳ ಸ್ರಾವ ಮತ್ತು ಮುಚ್ಚಿಹೋಗಿರುವ ರಂಧ್ರಗಳು ಮೊಡವೆಗಳಿಗೆ ಕಾರಣವಾಗುತ್ತವೆ.
ಕೆನ್ನೆ ಮತ್ತು ಹಣೆಯ ಮೇಲೆ ಮೊಡವೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಭುಜ, ಬೆನ್ನು ಮತ್ತು ಎದೆಯ ಮೇಲೂ ಮೊಡವೆಗಳೇಳುತ್ತವೆ. ಹಾಗಾಗಿ ಬೇಸಿಗೆಯಲ್ಲಿ ಮೊಡವೆ ಸಮಸ್ಯೆಯಿಂದ ಪಾರಾಗಲು ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ. ಆಲ್ಫಾ ಕ್ಯೂರ್ ಕಾಂಪ್ಲೆಕ್ಸ್ ಇರುವ, ನಿಮ್ಮ ಚರ್ಮವನ್ನು ಶುದ್ಧೀಕರಿಸುವ ಮತ್ತು ರಿಫ್ರೆಶ್ ಮಾಡುವ ಜೆಲ್ ಆಧಾರಿತ ಫೇಸ್‌ವಾಶ್ ಅನ್ನು ನೀವು ಆರಿಸಿಕೊಳ್ಳಬೇಕು. ಇದು ಬ್ಯಾಕ್ಟೀರಿಯಾ ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಚರ್ಮದ ತೇವಾಂಶದ ಮಟ್ಟವನ್ನು ಕಾಪಾಡುತ್ತದೆ. ಜಿಡ್ಡನ್ನು ಕಡಿಮೆ ಮಾಡುತ್ತದೆ.
ಮುಖವನ್ನು ತೊಳೆದ ತಕ್ಷಣ, ಟೋನರ್ ಅನ್ನು ಬಳಸುವುದರಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯವಾಗುತ್ತದೆ. ಮುಖದಲ್ಲಿನ ಪೋರ್ಸ್ ಅನ್ನು ಮುಚ್ಚಿಹಾಕುತ್ತದೆ. ಮುಖದಲ್ಲಿ ಮೊಡವೆಯನ್ನುಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ದಾಳಿಂಬೆ, ಹೈಡ್ರೇಟಿಂಗ್ ರೋಸ್ ವಾಟರ್, ನೆಲ್ಲಿಕಾಯಿ ಮತ್ತು ಪುದೀನಾದಿಂದ ಮಾಡಿರುವ ಟೋನರ್ ಬಳಸುವುದು ಉತ್ತಮ.
ಕೋಕಂ, ಗ್ರೀನ್ ಟೀ, ಗುಲಾಬಿ, ಕಿತ್ತಳೆ, ಅಲೋವೆರಾ, ಎಳನೀರು ಇವುಗಳನ್ನೊಳಗೊಂಡ ಮಾಯಿಶ್ಚರೈಸರ್ ಅನ್ನು ಆಯ್ಕೆ ಮಾಡಿಕೊಳ್ಳಿ. ಮನೆಯಲ್ಲೇ ಗಿಡಮೂಲಿಕೆಗಳಿಂದ ತಯಾರಿಸಿದ ಫೇಸ್ ಮಾಸ್ಕ್ ಬಳಸಿ. ಅವು ಕೃತಕ ಬಣ್ಣಗಳು ಮತ್ತು ರಾಸಾಯನಿಕಗಳಿಂದ ಮುಕ್ತವಾಗಿರುತ್ತವೆ. ಅಲೋವೆರಾ, ಕಡಲೆ ಹಿಟ್ಟು, ಕಿತ್ತಳೆ ರಸದಿಂದ ಮಾಡಿದ ಫೇಸ್ ಮಾಸ್ಕ್ ಗಳನ್ನು ಬಳಸುವುದರಿಂದ ಮೊಡವೆಗಳು ಏಳದಂತೆ ತಡೆಯಬಹುದು.
ಈ ನೈಸರ್ಗಿಕ ಪದಾರ್ಥಗಳು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತವೆ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತವೆ. ಇದನ್ನು ಹೊರತುಪಡಿಸಿ ನೀವು ರುತುಮಾನಕ್ಕೆ ತಕ್ಕಂತಹ ಹಣ್ಣು, ತರಕಾರಿಗಳನ್ನು ಸೇವಿಸಬೇಕು. ಕಲ್ಲಂಗಡಿ, ಸೀತಾಫಲ, ಕಿತ್ತಳೆ, ಎಳನೀರು, ಕ್ಯಾರೆಟ್, ಪಾಲಕ್ ಸೊಪ್ಪು, ಸಿಹಿ ಗೆಣಸು ಇವನ್ನೆಲ್ಲ ತಿನ್ನುವುದು ಒಳ್ಳೆಯದು. ಪದೇ ಪದೇ ಮುಖವನ್ನು ಮುಟ್ಟಿಕೊಳ್ಳಬೇಡಿ. ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಬೆವರು ಒರೆಸಲು ಮೃದುವಾದ ಹತ್ತಿಯ ಕರವಸ್ತ್ರವನ್ನೇ ಬಳಸಿ.