ಫಿಟ್‌ನೆಸ್ ಬಗ್ಗೆ ಹೆಚ್ಚು ಗಮನಹರಿಸುವವರೆಲ್ಲ ಗ್ರೀನ್ ಟೀ ಸೇವನೆ ಮಾಡ್ತಾರೆ. ಗ್ರೀನ್ ಟೀ ಕುಡಿಯುವುದರಿಂದ ತೂಕ ಕಡಿಮೆ ಮಾಡಬಹುದು ಜೊತೆಗೆ ಆರೋಗ್ಯಕ್ಕೂ ಇದು ಒಳ್ಳೆಯದು ಅನ್ನೋ ಭಾವನೆ ಬಹಳಷ್ಟು ಜನರಲ್ಲಿದೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕೂದಲಿನ ಹೊಳಪನ್ನು ಸಹ ಇದು ಕಾಪಾಡುತ್ತದೆ.
ಆದರೆ ಅತಿಯಾಗಿ ಸೇವನೆ ಮಾಡಿದ್ರೆ ಗ್ರೀನ್ ಟೀ ಕೂಡ ಅಪಾಯಕಾರಿಯಾಗಬಹುದು. ನಿಗದಿತ ಪ್ರಮಾಣಕ್ಕಿಂತ ಗ್ರೀನ್ ಟೀ ಕುಡಿದರೆ ಹೊಟ್ಟೆಯಲ್ಲಿ ಕಿರಿಕಿರಿ, ಸೆಳೆತ ಉಂಟಾಗಬಹುದು. ಇದನ್ನು ಹೆಚ್ಚು ಕುಡಿಯುವುದರಿಂದ ಹೊಟ್ಟೆಯಲ್ಲಿ ಆಮ್ಲ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದು ಅತಿಸಾರದ ಅಪಾಯವನ್ನು ಉಂಟುಮಾಡುತ್ತದೆ.
ಕರುಳಿನ ಸಿಂಡ್ರೋಮ್ ಇರುವವರು ಗ್ರೀನ್ ಟೀ ಕುಡಿಯಬಾರದು. ಗ್ರೀನ್ ಟೀ ಸೇವನೆಯಿಂದ ತಲೆನೋವು ಬರಬಹುದು. ಏಕೆಂದರೆ ಅದರಲ್ಲಿರುವ ಕೆಫೀನ್ ಮೈಗ್ರೇನ್ ಕಾಯಿಲೆಗೆ ಕಾರಣವಾಗಬಹುದು. ನೀವು ಕೆಫೀನ್ ಸೇವನೆಯಿಂದ ಅಲರ್ಜಿಯನ್ನು ಹೊಂದಿದ್ದರೆ ಈ ಪಾನೀಯವನ್ನು ಕುಡಿಯಬೇಡಿ.
ಗ್ರೀನ್ ಟೀಯಲ್ಲಿ ಕೆಫೀನ್ ಇರುವುದರಿಂದ ನಿದ್ರೆ ಕೊರತೆ ಉಂಟಾಗಬಹುದು. ಇದು ನಿದ್ದೆಗೆ ಸಹಾಯ ಮಾಡುವ ಮೆಲಟೋನಿನ್ ಎಂಬ ಹಾರ್ಮೋನ್ ಅನ್ನು ಅಸಮತೋಲನಗೊಳಿಸಲು ಪ್ರಾರಂಭಿಸುತ್ತದೆ. ನಿದ್ರಾಹೀನತೆಯ ಸಮಸ್ಯೆ ಇರುವವರು ಗ್ರೀನ್ ಟೀ ಕುಡಿಯಬಾರದು. ಮಲಬದ್ಧತೆಯ ಸಮಸ್ಯೆ ಇರುವವರು ಕೂಡ ಅಗತ್ಯಕ್ಕಿಂತ ಹೆಚ್ಚು ಗ್ರೀನ್ ಟೀ ಕುಡಿಯಬಾರದು. ಸಾಮಾನ್ಯವಾಗಿ ದಿನಕ್ಕೆ 3 ರಿಂದ 4 ಕಪ್ ಗ್ರೀನ್ ಟೀ ಸೇವನೆ ಸಾಕು.